ಭ್ರೂಣ ಹತ್ಯೆ ಪ್ರಕರಣ; ತಪ್ಪಿತಸ್ಥರ ಮೇಲೆ ಕಠಿಣ ಕ್ರಮ: ಸಚಿವ

Dinesh Gundurao
Published on

ಬೆಂಗಳೂರು:
ಭ್ರೂಣ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರೂಣ ಹತ್ಯೆ ಪ್ರಕರಣದಲ್ಲಿ ಲೋಪಗಳು ಕಂಡು ಬಂದರೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.
ತಾಲೂಕು ಮತ್ತು ಜಿಲ್ಲೆಯಲ್ಲಿ ಗರ್ಭಿಣಿಯರ ಸಂಖ್ಯೆ ಎಷ್ಟು ಎನ್ನುವುದನ್ನು ಪ್ರತಿ ತಿಂಗಳೂ ಮಾಹಿತಿ ಸಂಗ್ರಹಿಸುವುದು ಕಡ್ಡಾಯ. ಅದರ ಜೊತೆಗೆ ಜನನವಾದ ಪ್ರಕರಣಗಳನ್ನು ತಾಳೆ ಹಾಕಲಾಗುವುದು. ಒಂದು ವೇಳೆ ಗರ್ಭಪಾತವಾಗಿದ್ದರೆ ಯಾವ ಕಾರಣಕ್ಕಾಗಿ ಎನ್ನುವುದನ್ನು ಪತ್ತೆ ಮಾಡಿ ವರದಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಪ್ರತಿ ತಿಂಗಳು ಭೇಟಿ ಮಾಡಿ ಪರಿಶೀಲನೆ ಮಾಡಬೇಕು. ಈ ಬಗ್ಗೆ ಆಗಿಂದಾಗ್ಗೆ ಸಭೆಗಳನ್ನು ನಡೆಸಿ ಮಾಹಿತಿ ಪಡೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆ ಕಾರ್ಯದರ್ಶಿ ಮಟ್ಟದಲ್ಲಿಯೂ ಮಾಹಿತಿ ಪರಿಶೀಲನೆ ಸಭೆ ನಡೆಯಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ತಮ್ಮ ಮಟ್ಟದಲ್ಲಿಯೂ ಕೂಡ ಈ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಮಂಡ್ಯ ಡಿಎಚ್‌ಒ ಬಗ್ಗೆ ಗರಂ
ಭ್ರೂಣ ಹತ್ಯೆ ಪ್ರಕರಣ ವರದಿಯಾದ ಮೇಲೂ ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿರುವ ಮಂಡ್ಯ ಡಿಎಚ್‌ಒ ಬಗ್ಗೆ ಗರಂ ಆದ ಸಚಿವರು, ಈ ಬಗ್ಗೆ ವರದಿ ತರಿಸಿಕೊಳ್ಳುವಂತೆ ಇಲಾಖಾ ಆಯುಕ್ತರಿಗೆ ಸೂಚಿಸಿದರು. ಇಂಥಹ ಗಂಭೀರ ಪ್ರಕರಣದಲ್ಲಿ ಯಾರ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಅಂಧತ್ವ ನಿವಾರಣೆಗೆ ಕ್ರಮ
ಅಂಧತ್ವ ನಿವಾರಣೆಗಾಗಿ ವಿಶೇಷ ಆಂದೋಲನ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಕಣ್ಣು ಪರೀಕ್ಷಾ ಕಾರ್ಯ ನಡೆಸಲಾಗುವುದು. ಮೊದಲ ಹಂತದಲ್ಲಿ 8 ಜಿಲ್ಲೆಯಲ್ಲಿ ತಪಾಸಣೆ ನಡೆಯಲಿದೆ. ಹಂತ ಹಂತವಾಗಿ ಉಳಿದ ಜಿಲ್ಲೆಯಲ್ಲಿ ತಪಾಸಣೆ ನಡೆಯಲಿದೆ.
ವಿದ್ಯಾರ್ಥಿಗಳನ್ನು ಹೊರತುಪಡಿಸಿ ಈಗಾಗಲೇ 11 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ. 1.31 ಲಕ್ಷ ಜನರಿಗೆ ಕನ್ನಡಕ ನೀಡಲಾಗಿದೆ. 21452 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಿಸಲಾಗಿದೆ ಎಂದರು. ದಿನೇಶ್ ಗುಂಡೂರಾವ್ ಹೇಳಿದರು.

ಮಹಿಳೆಯರಲ್ಲಿ ಅನಿಮಿಯಾ:
ರಾಜ್ಯದಲ್ಲಿ 2025ರೊಳಗಾಗಿ ಅನಿಮೀಯಾ ಮುಕ್ತ ಪೌಷ್ಠಿಕ ಕರ್ನಾಟಕ ಮಾಡಬೇಕು ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದ ಶೇ 47ರಷ್ಟು ಮಹಿಳೆಯರು ಅನಿಮಿಯಾಕ್ಕೆ ಒಳಗಾಗಿದ್ದಾರೆ. 2023ರ ಒಳಗೆ ಈ ಪ್ರಮಾಣವನ್ನು ಶೇ 30ರಷ್ಟು ತಗ್ಗಿಸಲು ಉದ್ದೇಶಿಸಲಾಗಿದೆ. ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ 185.74 ಕೋಟಿ ರೂ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಅಂಗಾಂಗ ದಾನಿಗಳಿಗೆ ಗೌರವ:
ಅಂಗಾಂಗ ದಾನ ಮಾಡುವವರನ್ನು ಪ್ರೋತ್ಸಾಯಿಸಲು ನಿರ್ಧರಿಸಿದ್ದು. ಅವರ ಮನೆಗೇ ಇಲಾಖೆಯ ಅಧಿಕಾರಿಗಳು ತೆರಳಿ ಗೌರವ ಸಮರ್ಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಶೀಘ್ರ ದರ ಪರಿಷ್ಕರಣೆ
ಆಯುಷ್ಮಾನ್ ಭಾರತ್‌ಆರೋಗ್ಯ ಕರ್ನಾಟಕ ಯೋಜನೆಯ ದರವನ್ನು ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. 7 ವರ್ಷಗಳ ಬಳಿಕ ದರ ಪರಿಷ್ಕರಣೆ ನಡೆಯುತ್ತಿದೆ. ಈಗಾಗಲೇ 16,79,433 ಪ್ರಕರಣಗಳ ಚಿಕಿತ್ಸೆಗೆ 1079.29 ಕೋಟಿ ರೂ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net