ಕರೊನಾ ಭಯದಿಂದ ಪತ್ನಿಯೊಂದಿಗೆ ಅಂತರ ಕಾಯ್ದುಕೊಂಡ ನವವಿವಾಹಿತನ ಬದುಕಲ್ಲಿ ಬಿರುಗಾಳಿ​!

marriage
Published on

ಭೋಪಾಲ್​: ಮಹಾಮಾರಿ ಕರೊನಾ ವೈರಸ್​ ಕಾಲದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಸಲಹೆಯೇ ಇದೀಗ ಮಧ್ಯಪ್ರದೇಶದ ಭೋಪಾಲ್​ ವ್ಯಕ್ತಿಗೆ ದುಬಾರಿಯಾಗಿದ್ದು, ತಾನು ನಪುಂಸಕ ಅಲ್ಲ ಎಂಬುದನ್ನು ಪತ್ನಿಗೆ ಸಾಬೀತು ಮಾಡಲು ವೈದ್ಯಕೀಯ ಪರೀಕ್ಷೆ ಎದುರಿಸಿದ ಪ್ರಸಂಗ ನಡೆದಿದೆ.

ಹೆಸರೇಳಲು ಇಚ್ಛಿಸದ ವ್ಯಕ್ತಿ ಕರೊನಾ ಸಾಂಕ್ರಮಿಕ ಸಮಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಅಂದಿನಿಂದಲೂ ಪತ್ನಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದ. ಆದರೆ, ಪತಿಯ ಗಂಡಸ್ತನದ ಮೇಲೆಯೇ ಸಂಶಯ ವ್ಯಕ್ತಪಡಿಸಿ, ಪತ್ನಿ ಆತನನ್ನು ಬಿಟ್ಟು ತನ್ನ ತವರಿಗೆ ಹೋಗಿ ನೆಲೆಸಿದ್ದಳು.

ಪ್ರಕರಣ ಕೋರ್ಟ್​ ಮೆಟ್ಟಿಲೇರಿ, ತನ್ನ ಪತಿ ನಪುಂಸಕನಾಗಿದ್ದು, ದೈಹಿಕ ಸಂಬಂಧ ಹೊಂದಲು ಆತನಿಂದ ಸಾಧ್ಯವಿಲ್ಲ. ಹೀಗಾಗಿ ಪರಿಹಾರ ಕೊಡಿಸಿ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಳು. ಆದರೆ, ಕೋರ್ಟ್​ ಮಹಿಳೆಯ ಪತ್ನಿಯನ್ನು ಸಂಪರ್ಕಿಸಿದಾಗ ತಾನೂ ನಪುಸಂಕ ಅಲ್ಲ, ಕರೊನಾ ಭಯದಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದೆ ಎಂದು ಹೇಳಿದ್ದಾನೆ.

ಅಲ್ಲದೆ, ಬೇರೆ ಯಾವುದೇ ದಾರಿಯಿಲ್ಲದೆ ಶುಕ್ರವಾರ ದೈಹಿಕ ಪರೀಕ್ಷೆಗೆ ಒಳಗಾಗಿ ನಪುಂಸಕತೆ ಇಲ್ಲ ಎಂಬ ಪಾಸಿಟಿವ್​ ಪ್ರಮಾಣ ಪತ್ರವನ್ನು ಪಡೆದುಕೊಂಡ ವ್ಯಕ್ತಿಯು, ಪತ್ನಿಯ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಮಹಿಳೆ ಮಾತ್ರ ಮಾತನಾಡುವಾಗಲು ನನ್ನ ಪತ್ನಿ ನನ್ನೊಂದಿಗೆ ದೈಹಿಕ ಅಂತರ ಕಾಯ್ದುಕೊಳ್ಳುತ್ತಾರೆ. ಅಲ್ಲದೆ, ನನ್ನ ಅತ್ತೆ ಕಿರುಕುಳ ನೀಡುತ್ತಾರೆ ಎಂದು ದೂರಿದ್ದು, ಪತಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಆಕೆ ಮನಸ್ಸು ಮಾಡುತ್ತಿಲ್ಲ.

ಇದರ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ ಮಹಿಳೆ ನಾನು ಸುದೀರ್ಘ ಜೀವನವನ್ನು ಸಾಗಿಸಬೇಕಿದೆ. ಹೀಗಾಗಿ ನಿರ್ವಹಣಾ ಭತ್ಯೆ ಕೊಡಿಸುವಂತೆ ನ್ಯಾಯಾಲಯದ ಬಳಿ ಕೋರಿದ್ದೇನೆಂದು ಹೇಳಿದ್ದಾರೆ.

ಇಬ್ಬರ ಸೂಕ್ಷ್ಮ ವಿಚಾರ ಗಮನಿಸಿದ ಕೋರ್ಟ್​ ಇಬ್ಬರ ಬಳಿಯೂ ಆಪ್ತ ಸಮಾಲೋಚನೆ ನಡೆಸಿದ್ದು, ಕೊನೆಗೂ ಮಹಿಳೆ ಗಂಡನ ಜತೆ ತೆರಳಲು ಒಪ್ಪಿಕೊಂಡಿದ್ದಾಳೆ. ಮಹಿಳೆಯ ಪತಿಗೆ ಕರೊನಾ ಬಗ್ಗೆ ತೀವ್ರವಾದ ಭಯವಿತ್ತಂತೆ. ಅದರಲ್ಲೂ ಮದುವೆಯ ಬಳಿಕ ಪತ್ನಿಯ ಪಾಲಕರಲ್ಲಿ ಕೋವಿಡ್​ ಪಾಸಿಟಿವ್​ ಕಾಣಿಸಿಕೊಂಡಿದ್ದು, ಆತನ ಭಯ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಹೀಗಾಗಿ ಪತ್ನಿಯಿಂದ ಕರೊನಾ ಅಂಟಬಹುದು ಎಂಬ ಕಾರಣಕ್ಕೆ ಆಕೆಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದ ಎಂಬುದನ್ನು ಸ್ವತಃ ಆತನೇ ಕೋರ್ಟ್​ ಮುಂದೆ ಹೇಳಿಕೆ ನೀಡಿದ್ದಾನೆ.

ಅಂದಹಾಗೆ ಇಬ್ಬರು ಕಳೆದ ಜೂನ್​ 29ರಂದು ಮದುವೆಯಾಗಿದ್ದರು. ಬಳಿಕ ಇಬ್ಬರ ನಡುವಿನ ವೈಮನಸ್ಸಿನಿಂದ ಡಿಸೆಂಬರ್​ 2ರಂದು ಕೋರ್ಟ್​ ಮೆಟ್ಟಿಲೇರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net