40 ವರ್ಷ ಬಳಿಕ ಭೋಪಾಲ್ ಅಪಾಯಕಾರಿ ತ್ಯಾಜ್ಯ ವಿಲೇವಾರಿ; ವೈಜ್ಞಾನಿಕ ವಿಧಾನದಲ್ಲಿ ದಹನ

Bhopal Gas Tragedy
Published on

ಭೋಪಾಲ್: ಐದು ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದ ಅನಿಲ ಸೋರಿಕೆ ದುರಂತ ನಡೆದ 40 ವರ್ಷಗಳ ಬಳಿಕ ಯೂನಿಯನ್ ಕಾರ್ಬೆಡ್ ಫ್ಯಾಕ್ಟರಿಯ ಆವರಣದಲ್ಲಿದ್ದ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ಮೂಲಕದ ಭೋಪಾಲ್ ಜನರ 4 ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಜನರ ವಿರೋಧ: ಸಾವಿರಾರು ಜನರನ್ನು ಬಲಿ ಪಡೆದಿದ್ದ ಅಪಾಯಕಾರಿ ರಾಸಾಯನಿಕಗಳಿರುವ ತ್ಯಾಜ್ಯವನ್ನು ಪಿತ್ತಮ್ ಪುರಕ್ಕೆ ತರುವುದಕ್ಕೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತ್ಯಾಜ್ಯವನ್ನು ಇಲ್ಲಿಗೆ ತರುವ ಬದಲು ವಿದೇಶಕ್ಕೆ ಕಳುಹಿಸಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

5474 ಜನರ ಸಾವು: 1984ರ ಡಿಸೆಂಬರ್ 2 ಮತ್ತು 3ರಂದು ಮಧ್ಯಪ್ರದೇಶದ ಭೋಪಾಲದಲ್ಲಿ ಯೂನಿಯನ್ ಕಾರ್ಬೆಡ್ ಕಂಪನಿಯ ಫ್ಯಾಕ್ಟರಿಯಲ್ಲಿ ಮಿಥೈಲ್ ಐಸೊಸೈನೇಟ್ ಎಂಬ ಅನಿಲ ಸೋರಿಕೆ ಉಂಟಾಗಿತ್ತು. ಪ್ರಪಂಚದ ಅತ್ಯಂತ ಭೀಕರ ಕೈಗಾರಿಕೆ ದುರಂತಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ 5474 ಜನರು ಮೃತಪಟ್ಟಿದ್ದರು. ವಿಷಾನಿಲದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಅಂಗವೈಕಲ್ಯಕ್ಕೆ ತುತ್ತಾಗಿದ್ದರು.

ಗಂಟೆಗೆ 90 ಕೆಜಿ ದಹನ: ಮಧ್ಯಪ್ರದೇಶದ ಪಿತ್ತಾಮ್ುರದಲ್ಲಿರುವ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಪಾಯಕಾರಿ ತ್ಯಾಜ್ಯವನ್ನು ನಾಶಪಡಿಸುವ ಕಾರ್ಯ ನಡೆಯಲಿದೆ. ಇಲ್ಲಿ ವಿಷಕಾರಿ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ದಹಿಸಿ ನಾಶಪಡಿಸಲಾಗುತ್ತದೆ. ನೆಲದಿಂದ 25 ಅಡಿ ಎತ್ತರದಲ್ಲಿ ನಿರ್ವಿುಸಿರುವ ಮರದ ವೇದಿಕೆ ಮೇಲೆ ಪ್ರತಿ ಗಂಟೆಗೆ 90 ಕೆ.ಜಿ. ತ್ಯಾಜ್ಯವನ್ನು ದಹಿಸಬಹುದು. ದಹನ ಪ್ರಕ್ರಿಯೆಯನ್ನು ತೀವ್ರಗೊಳಿಸಿದರೆ ಗಂಟೆಗೆ 270 ಕೆ.ಜಿ.ಯವರೆಗೆ ದಹಿಸಬಹುದು.

Bhopal Gas Tragedy

153 ದಿನ ಬೇಕು: ಗಂಟೆಗೆ 90 ಕೆ.ಜಿ ತ್ಯಾಜ್ಯ ದಹಿಸಿದರೆ 337 ಟನ್ ತ್ಯಾಜ್ಯ ದಹನಕ್ಕೆ 153 ದಿನ ಬೇಕಾಗುತ್ತದೆ. ವಿಷಕಾರಿ ತ್ಯಾಜ್ಯವನ್ನು ದಹಿಸಿದಾಗ ಬಿಡುಗಡೆ ಯಾಗುವ ಅಪಾಯಕಾರಿ ಅನಿಲದ ಪ್ರಮಾಣದ ಮೇಲೆ ನಿಗಾ ಇರಿಸಲು ವಿಶೇಷ ಉಪಕರಣಗಳನ್ನು ಹಲವೆಡೆ ಸ್ಥಾಪಿಸಲಾಗಿದೆ. 337 ಟನ್ ತ್ಯಾಜ್ಯ ದಹನ ಪ್ರಕ್ರಿಯೆ ಮುಗಿಯುವವರೆಗೆ ಪರಿಸರಕ್ಕೆ ಹಾನಿಯಾಗದಂತೆ ತಜ್ಞರು ನಿಗಾ ವಹಿಸಲಿದ್ದಾರೆ.

200 ನುರಿತ ಕಾರ್ವಿುಕರ ಬಳಕೆ: ಅನಿಲ ಸೋರಿಕೆ ಬಳಿಕ ಯೂನಿಯನ್ ಕಾರ್ಬೆಡ್ ಫ್ಯಾಕ್ಟರಿಯನ್ನು ಬಂದ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ ಸೋರಿಕೆ ಬಳಿಕ ಅಪಾಯಕಾರಿ ರಾಸಾಯನಿಕಗಳು ಆ ಸ್ಥಳದಲ್ಲಿದ್ದವು. ಪ್ರಸ್ತುತ ಫ್ಯಾಕ್ಟರಿ ಸ್ಥಳದಲ್ಲಿದ್ದ ಅಪಾಯಕಾರಿ ರಾಸಾಯನಿಕಗಳು, ರಸಗೊಬ್ಬರ ಮತ್ತು ರಾಸಾಯನಿಕಗಳ ಉಳಿಕೆ, ಸ್ಥಳದಲ್ಲಿದ್ದ ಮಣ್ಣನ್ನು ನಾಶಪಡಿಸಲು ತೆಗೆದುಕೊಂಡು ಹೋಗಲಾಗಿದೆ. ಸುಮಾರು 200 ನುರಿತ ಕಾರ್ವಿುಕರು 30 ನಿಮಿಷದ ಶಿಫ್ಟ್ ನಲ್ಲಿ ತ್ಯಾಜ್ಯವನ್ನು ಕಂಟೇನರ್​ಗೆ ತುಂಬಿಸಿದ್ದಾರೆ. ಪಿಪಿಇ ಕಿಟ್​ಗಳನ್ನು ಧರಿಸಿ ಕಾರ್ಯನಿರ್ವಹಿಸಿದ್ದರು.

ನಿರ್ದೇಶನ ನೀಡಿದ್ದ ಹೈಕೋರ್ಟ್: ಅನಿಲ ದುರಂತದ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಜನರು ದಶಕಗಳಿಂದ ಮನವಿ ಮಾಡುತ್ತಿದ್ದರು. ಹಲವು ಸಂಘಟನೆಗಳು ತ್ಯಾಜ್ಯ ವಿಲೇವಾರಿಗೆ ನಿರ್ದೇಶನ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ತ್ಯಾಜ್ಯ ವಿಲೇವಾರಿ ಮಾಡುವಂತೆ 2024ರ ಡಿಸೆಂಬರ್ 3 ರಂದು ನಿರ್ದೇಶನ ನೀಡಿ ಇದಕ್ಕಾಗಿ 4 ವಾರಗಳ ಗಡುವು ನೀಡಿತ್ತು.

ಬಿಗಿ ಭದ್ರತೆಯಲ್ಲಿ ತ್ಯಾಜ್ಯ ಸಾಗಣೆ: ಯೂನಿಯನ್ ಕಾರ್ಬೆಡ್ ಫ್ಯಾಕ್ಟರಿ ಆವರಣದಲ್ಲಿದ್ದ ವಿಷಕಾರಿ ತ್ಯಾಜ್ಯವನ್ನು ಬಿಗಿ ಭದ್ರತೆಯಲ್ಲಿ ಪಿತ್ತಮ್​ಪುರಕ್ಕೆ ರವಾನಿಸಲಾಗಿದೆ. 12 ವಿಶೇಷ ಕಂಟೇನರ್​ಗಳಲ್ಲಿ ತ್ಯಾಜ್ಯವನ್ನು ತುಂಬಿಸಿ ಭೋಪಾಲ್​ನಿಂದ 250 ಕಿ.ಮೀ. ದೂರದಲ್ಲಿರುವ ಪಿತ್ತಮ್​ಪುರಕ್ಕೆ ತ್ಯಾಜ್ಯವನ್ನು ತರಲಾಗಿದೆ. ತ್ಯಾಜ್ಯ ಸಾಗಣೆಯ ಮಾರ್ಗದುದ್ದಕ್ಕೂ ಗ್ರೀನ್ ಕಾರಿಡಾರ್ ನಿರ್ವಿುಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net