ಸ್ಮಶಾನದ ಒಳಾಂಗಣ ಅಭಿವೃದ್ಧಿಗೆ ಭೂಮಿಪೂಜೆ

HUN-FEB-15-1(GUDDALI POOJE)
ಹುಣಸೂರು ನಗರದ ಸರಸ್ವತಿಪುರಂ ಬಡಾವಣೆಯ ನಿವಾಸಿಗಳ ಸ್ಮಶಾನದ ಅಭಿವೃದ್ಧಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು. ಎಸ್.ಶರವಣ, ಗಣೇಶ್ ಕುಮಾರಸ್ವಾಮಿ, ಸತೀಶ್‌ಕುಮಾರ್, ನಾಗರಾಜು, ಹರವೆ ಶ್ರೀಧರ್, ಕೆ.ಮಾನಸಾ ಇತರರಿದ್ದರು.
Published on

ಹುಣಸೂರು: ಅಮೃತ್ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತ(ಪ್ಯಾಕೇಜ್-3)ದಡಿ ಅನುಮೋದನೆಗೊಂಡಿರುವ ನಗರದ ಸರಸ್ವತಿಪುರಂ ಬಡಾವಣೆಯ ಪರಿಶಿಷ್ಟ ಜಾತಿಯ ಜನಾಂಗದ ಸ್ಮಶಾನದ ಒಳಾಂಗಣ ಅಭಿವೃದ್ಧಿಗಾಗಿ 15.81 ಲಕ್ಷ ರೂ.ವೆಚ್ಚದ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು.

ಶನಿವಾರ ಸ್ಮಶಾನದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದ ಸರಸ್ವರಿಪುರಂ ನಾಗರಿಕರ ಬಹುವರ್ಷಗಳ ಬೇಡಿಕೆಯನ್ನು ಇದೀಗ ಈಡೇರಿಸಲಾಗುತ್ತಿದೆ. ಬಡಾವಣೆಯಿಂದ ಸಾಕಷ್ಟು ದೂರದಲ್ಲಿ ಸ್ಮಶಾನವಿದ್ದು, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿತ್ತು. ಇದೀಗ ಅಮೃತ್ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿಗೆ ಅವಕಾಶ ದೊರೆತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಗಳಿಗೆ ಅನುದಾನದ ಲಭ್ಯತೆ ದೊರಕದಿರುವ ಕಾರಣ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬೀಳುತ್ತಿವೆ. ಈ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಸರಸ್ವತಿಪುರಂ ಬಡಾವಣೆಯ ನಿವಾಸಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣದ ಅವಶ್ಯಕತೆಯಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದರು.

ನಗರಸಭಾಧ್ಯಕ್ಷ ಎಸ್.ಶರವಣ, ಸದಸ್ಯ ಸತೀಶ್‌ಕುಮಾರ್, ಗಣೇಶ್ ಕುಮಾರಸ್ವಾಮಿ, ಮುಖಂಡರಾದ ಹರವೆ ಶ್ರೀಧರ್, ನಾಗರಾಜು, ನಗರಸಭೆ ಪೌರಾಯುಕ್ತೆ ಕೆ.ಮಾನಸಾ, ಎಇಇ ಶರ್ಮಿಳಾ, ಎಇ ಸಮಂತ್ ಮತ್ತು ಬಡಾವಣೆ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net