

ಭೋಪಾಲ್: ತಿಂಗಳಿಗೆ 6 ಸಾವಿರ ರೂ. ಸಂಪಾದಿಸುವ ವ್ಯಕ್ತಿಯ ಹೆಸರಿನಲ್ಲಿ 132 ಕೋಟಿ ರೂಪಾಯಿ ಬ್ಯಾಂಕ್ ವ್ಯವಹಾರ ನಡೆದಿರುವುದಕ್ಕೆ ವಿವರಣೆ ಕೇಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ನಡೆದಿದೆ.
ರವಿ ಗುಪ್ತಾ ಎಂಬುವರು ಮಧ್ಯಪ್ರದೇಶದ ಗ್ವಾಲಿಯರ್ ಪಟ್ಟಣದ ಭಿಂದ್ ಏರಿಯಾದ ನಿವಾಸಿಯಾಗಿದ್ದಾರೆ. ನಿಮ್ಮ ಹೆಸರಿನ ಆ್ಯಕ್ಸಿಸ್ ಬ್ಯಾಂಕ್ ಖಾತೆಯಲ್ಲಿ 132 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದಕ್ಕೆ ವಿವರಣೆ ನೀಡಿ ಎಂದು ಐಟಿ ನೋಟಿಸ್ ಕಳುಹಿಸಿರುವುದಾಗಿ ಸ್ವತಃ ಗುಪ್ತ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಶೇಷವೆಂದರೆ ಗುಪ್ತ ಅವರ ಮಾಸಿಕ ಆದಾಯ ಕೇವಲ 6 ಸಾವಿರ ರೂ. ಮಾತ್ರ.
ಇದನ್ನೂ ಓದಿ: ನಿಮ್ಮ ಖಾತೆಗೆ 58 ಲಕ್ಷ ರೂ. ಜಮಾ ಆಗಿದ್ದು 1.05 ಕೋಟಿ ರೂ. ತೆರಿಗೆ ಪಾವತಿಸಿ: ಸ್ಲಂ ನಿವಾಸಿಗೆ ಐಟಿ ಶಾಕ್
ಇದೊಂದು ಫೋರ್ಜರಿ ಎಂದು ಕರೆದಿರುವ ಗುಪ್ತ, ಈ ವಿಚಾರ ಆ್ಯಕ್ಸಿಸ್ ಬ್ಯಾಂಕ್ನಿಂದ ತಿಳಿಯಿತು. 2011ರಲ್ಲಿ ಮುಂಬೈ ಶಾಖೆಯಲ್ಲಿ ಖಾತೆ ತೆರೆಯಲಾಗಿದೆ. ಇದರ ಮೂಲಕವೇ 132 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದಕ್ಕೆ ಸಂಬಂಧಿಸಿ ಅನೇಕ ಬಾರಿ ಐಟಿ ನನಗೆ ನೋಟಿಸ್ ನೀಡಿದೆ ಎಂದು ಗುಪ್ತ ತಿಳಿಸಿದ್ದಾರೆ.
ಇದೀಗ 3.5 ಕೋಟಿ ರೂಪಾಯಿ ತೆರಿಗೆ ಸಂದಾಯ ಮಾಡುವಂತೆ ಐಟಿ ಬೇಡಿಕೆಯಿಟ್ಟಿದೆ. ಆದರೆ, ಬ್ಯಾಂಕ್ ಖಾತೆಯನ್ನು ನಾನು ತೆರೆದಿಲ್ಲ. ಬೇರೊಬ್ಬರು ನನ್ನ ಹೆಸರಿನಲ್ಲಿ ಖಾತೆಯನ್ನು ತೆರೆದಿರಬಹುದು ಅಥವಾ ಆ್ಯಕ್ಸಿಸ್ ಬ್ಯಾಂಕ್ ಅವರೇ ತೆರೆದಿರಬಹುದು ಎಂದು ಗುಪ್ತ ಆರೋಪಿಸಿದ್ದಾರೆ. ಆದರೆ, ಬ್ಯಾಂಕ್ ಇದನ್ನು ಅಲ್ಲಗೆಳೆದಿದ್ದು, ಐಟಿ ಇಲಾಖೆಗೆ ಹೋಗಿ ಕೇಳುವಂತೆ ಹೇಳಿದೆ. ಈ ಸಂಬಂಧ ಗುಪ್ತ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)