

ಬೆಂಗಳೂರು: ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ 1925ರ ಏ.11ರಂದು ಆಯೋಜಿಸಿದ್ದ ಅಸ್ಪೃಶ್ಯತೆ ನಿವಾರಣಾ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ಡಾ.ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಆಗಮಿಸಿದ್ದು. ಈ ಭೇಟಿಗೆ 100 ವರ್ಷಗಳಾಗುತ್ತಿರುವ ಕಾರಣ ‘ಭೀಮ ಹೆಜ್ಜೆ, ನೂರರ ಸಂಭ್ರಮ’ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಮಾಹಿತಿ ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಏ.11ರಂದು ರಥಯಾತ್ರೆ ಚಾಲನೆ ಪಡೆಯಲಿದೆ. ಏ.15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶದೊಂದಿಗೆ ‘ಭೀಮ ಹೆಜ್ಜೆ ನೂರರ ಸಂಭ್ರಮ’ದೊಂದಿಗೆ ಸಂಪನ್ನವಾಗಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಬೆಂಗಳೂರು ಮತ್ತು ನಿಪ್ಪಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕೇಂದ್ರದ ಸಚಿವರೊಬ್ಬರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಡಾ.ಅಂಬೇಡ್ಕರ್ಗೆ ಆದ ಅಪಮಾನ, ಅನ್ಯಾಯ ಹಾಗೂ ಬಿಜೆಪಿ ನೀಡಿದ ಸನ್ಮಾನದ ಬಗ್ಗೆ ರಥಯಾತ್ರೆಯುದ್ದಕ್ಕೂ ತಿಳಿಸಿ, ಜಾಗೃತಿ ಮೂಡಿಸಲಾಗುವುದು ಎಂದು ಎನ್.ಮಹೇಶ್ ತಿಳಿಸಿದರು.
ರಥಯಾತ್ರೆಗೆ ಅಲ್ಲಲ್ಲಿ ದ್ವಿಚಕ್ರ ವಾಹನಗಳ ರ್ಯಾಲಿ ಮೂಲಕ ಸ್ವಾಗತ ದೊರೆಯಲಿದೆ. ಹುಬ್ಬಳ್ಳಿಯಲ್ಲಿ ಕಾರ್ಯಕ್ರಮದ ಬಳಿಕ ಏ.14ರಂದು ಡಾ.ಅಂಬೇಡ್ಕರ್ ಜಯಂತಿ ನಿಮಿತ್ತ ಒಂದು ದಿನದ ಬಿಡುವು ನೀಡಿ, ನಿಪ್ಪಾಣಿಯಲ್ಲಿ 15ಕ್ಕೆ ಸಮಾವೇಶ ನಡೆಸಲಾಗುತ್ತಿದೆ.
ನೂರು ವರ್ಷಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಮಾವೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣದ ಅವಶ್ಯಕತೆ ಪ್ರತಿಪಾದಿಸಿ, ಹಾಸ್ಟೆಲ್ಗಳು ಮತ್ತು ವಸತಿ ಶಾಲೆಗಳಿಗೆ ಆದ್ಯತೆ ನೀಡಲು ತಿಳಿಸಿದ್ದರು.
ದೇಶ, ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ರಾಜ್ಯದಲ್ಲಿ 200 ಹಾಸ್ಟೆಲ್ಗಳು ಹಾಗೂ 100 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲದೆ, ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ ಎಂದು ಎನ್.ಮಹೇಶ್ ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದು 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಏರ್ಪಡಿಸಲು ನಿರ್ಧರಿಸಿತ್ತು. ಇದೇ ವೇಳೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಯವರು, ಬಾಬಾಸಾಹೇಬ್ ಅಂಬೇಡ್ಕರ್ ರಾಜ್ಯಕ್ಕೆ ಕಾಲಿರಿಸಿ 2025ರ ಏ.11ರಂದು ನೂರು ವರ್ಷಗಳಾಗಲಿವೆ.
ನೂರರ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಬೇಕು ಎಂದು ಬೆಳಗಾವಿ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಲಿಲ್ಲ. ಬಿಜೆಪಿ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಪರ್ಯಾಯ ಅಥವಾ ಪ್ರತಿಯಾಗಿ ನಡೆಸುತ್ತಿದ್ದೇವೆ ಎಂದು ಅರ್ಥೈಸಿಬೇಕಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷದವರು ಶತಮಾನೋತ್ಸವ ಆಚರಿಸಿದ್ದರೂ ನಮ್ಮ ಕಾರ್ಯಕ್ರಮ ನಡೆಯುತ್ತಿತ್ತು ಎಂದು ಎನ್.ಮಹೇಶ್ ಸ್ಪಷ್ಟಪಡಿಸಿದರು.