ಭೀಮ ಕೋರೇಗಾಂವ್ ವಿಜಯೋತ್ಸವ ಪ್ರಚಾರ ರಥಕ್ಕೆ ಚಾಲನೆ

05NGD1
Published on

ನಂಜನಗೂಡು: ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ ಅಂಗವಾಗಿ ಪ್ರಚಾರ ರಥಕ್ಕೆ ಭಾನುವಾರ ಉಪವಿಭಾಗದ ಡಿವೈಎಸ್ಪಿ ಪ್ರಭಾಕರ್ ಶಿಂಧೆ ಚಾಲನೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದ ಅಲಂಕೃತ ಪ್ರಚಾರಕ್ಕೆ ಹಸಿರು ನಿಶಾನೆ ತೋರಿದ ಪ್ರಭಾಕರ್ ಶಿಂಧೆ, ಎರಡು ಶತಮಾನಗಳ ಹಿಂದೆ ನಡೆದ ಕೋರೇಗಾಂವ್ ಯುದ್ಧದಲ್ಲಿ ದಲಿತ ಸೈನಿಕರು ತೋರಿದ ಸ್ವಾಭಿಮಾನದ ದಿಟ್ಟ ಪ್ರತಿರೋಧದ ಹಿನ್ನೆಲೆಯಲ್ಲಿ ಜಯಶಾಲಿಗಳಾದರು. ಅವರ ದಿಟ್ಟ ಹೋರಾಟ ದಲಿತರಿಗೆ ದಾರಿದೀಪವಾಗಲಿ ಎಂದು ಆಶಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ವೈಚಾರಿಕ ನೆಲೆಗಟ್ಟಿನಲ್ಲಿ ವಿಚಾರಗಳನ್ನು ಸಾರ್ವಜನಿಕರಿಗೆ ತಲುಪಿಸುವ ದಿಶೆಯಲ್ಲಿ ಕೋರೇಗಾಂವ್ ವಿಜಯೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಧರ್ಮದ ಹೆಸರಲ್ಲಿ ಪ್ರತ್ಯೇಕತೆ ಹಾಗೂ ಕಂದಕ ಸೃಷ್ಟಿಸುವ ಕಾನೂನು ತಿದ್ದುಪಡಿ ಮಾಡುವ ಅಲ್ಪಾಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಹೀಗಾಗಿ ದಲಿತರು ಹಾಗೂ ಅಲ್ಪಸಂಖ್ಯಾತರು ಸಂಘಟಿತ ಹೋರಾಟ ನಡೆಸುವ ಮೂಲಕ ನಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ಜ.12ರಂದು ನಡೆಯುವ ಕೋರೇಗಾಂವ್ ವಿಜಯೋತ್ಸವ ಹಿನ್ನೆಲೆ ಪ್ರತಿ ಗ್ರಾಮಗಳಿಗೂ ಪ್ರಚಾರ ರಥ ತೆರಳಲಿದೆ. ಅಂದು ನಡೆಯುವ ಸಮಾವೇಶದಲ್ಲಿ ತಾಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪಟ್ಟಣ ಠಾಣೆ ಪಿಎಸ್‌ಐ ಯಾಸ್ಮಿನ್ ತಾಜ್, ಒಕ್ಕೂಟದ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ಶಂಕರಪುರ ಸುರೇಶ್, ಮಹದೇವಸ್ವಾಮಿ, ಕಾರ್ಯ ಬಸವಣ್ಣ, ನಗರ್ಲೆ ವಿಜಯಕುಮಾರ್, ಶಂಕರಪುರ ಮಂಜು, ಅಭಿನಾಗಭೂಷಣ್, ಹರದನಹಳ್ಳಿ ರಾಜೇಶ್, ಪ್ರತಿಧ್ವನಿ ತ್ರಿನೇಶ್ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net