2023ಕ್ಕೆ ಕುಮಾರಣ್ಣನೇ ಸಿಎಂ; ಹಾಸನದಲ್ಲಿ ಎಚ್​ಡಿಕೆಯನ್ನು ಹೊಗಳಿದ ಭವಾನಿ ರೇವಣ್ಣ!

HDK
Published on

ಹಾಸನ: ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿತ್ತು, ಹಲವು ಹಿರಿಯ ನಾಯಕರು ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಇದಲ್ಲದೆ ಹಾಸನ ವಿಧಾನಸಭಾ ಕ್ಷೇತ್ರ ಸದ್ಯ ಹಲವು ಕಾರಣಗಳಿಂದ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಭವಾನಿ ರೇವಣ್ಣ. ಈ ಹಿಂದೆ ವೇದಿಕೆಯೊಂದರಲ್ಲಿ ಭವಾನಿ ರೇವಣ್ಣ ಮಾತನಾಡುತ್ತಾ, ಹಾಸನದಿಂದ ಈ ಬಾರಿ ಸ್ಪರ್ಧಿಸುವುದಾಗಿ ಹೇಳಿದ್ದರು. ಇದು ಜೆಡಿಎಸ್ ಪಾಳಯದಲ್ಲಿ ದೊಡ್ಡ ಸಂಚಲನದ ಹುಟ್ಟಿಗೆ ಕಾರಣವಾಗಿತ್ತು.

ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದರೂ, ಬಹುತೇಕ ಮಂದಿ ಭವಾನಿ ರೇವಣ್ಣ ಅವರಿಗೆ ಹಾಸನದಿಂದ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ನಿಟ್ಟೂರಿನಲ್ಲಿ ಭವಾನಿ ರೇವಣ್ಣ ಮಾತನಾಡುತ್ತಾ, ‌ಕುಮಾರಸ್ವಾಮಿ ಅವರನ್ನು ‌ಹಾಡಿ ಹೊಗಳಿದ್ದಾರೆ.

2023ರಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಕುಮಾರಣ್ಣ ಬಿಸಿಲನ್ನು ಲೆಕ್ಕಿಸದೆ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಕಳೆದ ಬಾರಿ ಪೂರ್ಣವಧಿ ಅವಕಾಶ ನೀಡಿದ್ದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದರು. ಈ ಬಾರಿ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಹೀಗಾಗಿ ಅವರಿಗೆ ಇನ್ನಷ್ಟು ಬಲ ತುಂಬಬೇಕು ಎಂದು ಹೇಳಿದರು.

ಸದ್ಯ ಹಾಸನದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಕುಟುಂಬ ಪ್ರಚಾರಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಹಾಸನ ವಿಧಾನಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net