

ಚಿಕ್ಕಮಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್ ವಿಚಾರವಾಗಿ ಭವಾನಿ ರೇವಣ್ಣ ಕಾರು ಚಾಲಕನನ್ನು ವಿಶೇಷ ತನಿಖಾ ದಳದ (SIT) ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅಜಿತ್ ಎಂದು ಗುರುತಿಸಲಾಗಿದ್ದು, ಈತನನ್ನು ಎಸ್ಐಟಿ ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.
ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಕಾರು ಚಾಲಕ ಅಜಿತ್ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದರು.
ಮೈಸೂರು ಜಿಲ್ಲೆ ಕೆಆರ್ನಗರ ಮೂಲದ ಸಂತ್ರಸ್ತೆಯನ್ನು ಅಜಿತ್ ಕರೆದುಕೊಂಡು ಹೋಗಿದ್ದ ಎಂಬ ಮಾಹಿತಿ ಲಭ್ಯವಾಗಿತ್ತು. ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವಿಡಿಯೋ ಚಿತ್ರೀಕರಿಸಿದ್ದ ಎಂದು ತಿಳಿದು ಬಂದಿದೆ. ಹೀಗಾಗಿಯೇ ಅಜಿತ್ಗಾಗಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು ಎಂದು ವರದಿಯಾಗಿದೆ.