ಶ್ರೀಕೃಷ್ಣನಿಗೆ ರಾಧೆ ಸಿಕ್ಕಳು; ಭಾವನಾ ಮೆನನ್ ಎಂಟ್ರಿ

Ullasa-3
Published on

ಬೆಂಗಳೂರು: ನಾಗಶೇಖರ್ ನಿರ್ದೇಶನದಲ್ಲಿ ಇತ್ತೀಚೆಗಷ್ಟೇ ಸರಳ ಮುಹೂರ್ತ ನೆರವೇರಿಸಿಕೊಂಡ ‘ಶ್ರೀಕೃಷ್ಣ@ಜೀಮೇಲ್.ಕಾಮ್ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಮೊದಲು ಈ ಸಿನಿಮಾದಲ್ಲಿ ನಾಯಕ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರ ಬದಲಿಗೆ ಮತ್ತೋರ್ವ ಸ್ಟಾರ್ ನಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂದರೆ, ಇದೇ ಮೊದಲ ಬಾರಿ ಕೃಷ್ಣಗೆ ಜೋಡಿಯಾಗಿ ಭಾವನಾ ಮೆನನ್ ನಟಿಸುವುದು ಅಧಿಕೃತವಾಗಿದೆ.

ಇತ್ತೀಚೆಗಷ್ಟೇ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆ ಸುದ್ದಿಗೆ ಬ್ರೇಕ್ ಹಾಕಿರುವ ನಾಗಶೇಖರ್, ‘ಆರಂಭದಲ್ಲಿ ಈ ಇಬ್ಬರು ನಟಿಯರ ಹೆಸರು ನಮ್ಮ ಪರಿಶೀಲನೆಯಲ್ಲಿತ್ತು. ಬಳಿಕ ಭಾವನಾ ಅವರನ್ನು ಆಯ್ದುಕೊಂಡೆವು. ಈ ಮೊದಲು ಬೇರಾವ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿಲ್ಲ. ನಮ್ಮ ಸಿನಿಮಾದಲ್ಲಿ ಫ್ರೆಶ್ ಜೋಡಿಯನ್ನು ಪರಿಚಯಿಸುತ್ತಿದ್ದೇವೆ. ನೋಡುಗರಿಗೂ ಇದು ಹೊಸ ಅನುಭವ ನೀಡಲಿದೆ. ಸದ್ಯದ ಪ್ಲಾನ್ ಪ್ರಕಾರ ಸೆಪ್ಟೆಂಬರ್​ನಿಂದ ಶೂಟಿಂಗ್​ಗೆ ಚಾಲನೆ ನೀಡಬೇಕೆಂಬ ತಯಾರಿ ನಡೆಯುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ನಾಗಶೇಖರ್. ಇತ್ತ ‘ಭಜರಂಗಿ 2’ ಚಿತ್ರದಲ್ಲಿಯೂ ಭಾವನಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇನ್​ಸ್ಪೆಕ್ಟರ್ ವಿಕ್ರಂ’ ಸಿನಿಮಾ ಕೆಲಸಗಳನ್ನೂ ಅವರು ಮುಗಿಸಿಕೊಂಡಿದ್ದಾರೆ. ಇದೀಗ ಸೆಪ್ಟಂಬರ್ ಆರಂಭದಿಂದ ಕೃಷ್ಣನ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರೀತಮ್ ಗುಬ್ಬಿ ಸಂಭಾಷಣೆ, ಸತ್ಯ ಹೆಗಡೆ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net