

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಆಡಳಿತ ಮುಂದುವರಿಕೆಗೆ ಮೂರನೇ ಎರಡಂಶದ ಬಹುಮತ ಪ್ರಾಪ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಂಸದೀಯ ಚುನಾವಣೆಯಲ್ಲಿ ಬಹುಮತ ಪಡೆಯುವುದು ಅವಶ್ಯ. ಸೆ.17ರಿಂದ 19ರ ತನಕ ನಡೆದ ಸಂಸದೀಯ ಚುನಾವಣೆಯ ಮತ ಎಣಿಕೆ ಸೋಮವಾರ ಆರಂಭವಾಗಿದೆ. ವರದಿ ಪ್ರಕಾರ, ಶೇಕಡ 85 ಮತ ಎಣಿಕೆ ಪೂರ್ಣಗೊಂಡಿದೆ. ಯುನೈಟೆಡ್ ರಷ್ಯಾ ಪಾರ್ಟಿಗೆ ಮೂರನೇ ಎರಡಂಶದ ಬಹುಮತ ಸಿಗುವುದು ಖಾತರಿಯಾಗಿದೆ. 225 ಸಂಸತ್ ಸ್ಥಾನಗಳಿಗೆ ನಡೆದ ಚುನಾವಣೆಯು 2024 ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷ ಪುತಿನ್ ಅವರನ್ನು ಅಭ್ಯರ್ಥಿತನವನ್ನು ಬಲಪಡಿಸುವ ವೇದಿಕೆಯಂತೆಯೇ ಭಾಸವಾಗಿತ್ತು. ಸದ್ಯದ ಫಲಿತಾಂಶ ಪ್ರಕಾರ, ಶೇಕಡ 85 ಮತ ಎಣಿಕೆ ಪೂರ್ಣಗೊಂಡಿದ್ದು, ಯುನೈಟೆಡ್ ರಷ್ಯಾ ಪಾರ್ಟಿಗೆ 49.7% ಮತಗಳು ಸಿಕ್ಕಿವೆ. ಇದು 225 ಸ್ಥಾನಗಳಿಗೆ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಿವೆ. ಇನ್ನೊಂದೆಡೆ 225 ಸ್ಥಾನಗಳಿಗೆ ವೈಯಕ್ತಿಕ ಸ್ಪರ್ಧೆ ನಡೆದಿದ್ದು, ಇದರಲ್ಲಿ ಯುನೈಟೆಡ್ ರಷ್ಯಾ ಪಾರ್ಟಿಯ 195 ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಇದು ಏಕ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎಂದು ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.
450 ಸ್ಥಾನದಲ್ಲಿ 315ರಲ್ಲಿ ಪುತಿನ್ ಪಕ್ಷಕ್ಕೆ ಗೆಲುವು?: ಸದ್ಯದ ಫಲಿತಾಂಶ ಗಮನಿಸಿದರೆ, ಮುನ್ನಡೆ ಸೇರಿ ಯುನೈಟೆಡ್ ರಷ್ಯಾ ಪಾರ್ಟಿಗೆ 450 ಸ್ಥಾನಗಳ ಪೈಕಿ 315ರಲ್ಲಿ ಗೆಲುವು ಸಿಕ್ಕುವ ಸಾಧ್ಯತೆ ದಟ್ಟವಾಗಿದೆ. ಫಲಿತಾಂಶ ಖಚಿತವೇ ಆದರೆ, 2016ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಯುನೈಟೆಡ್ ರಷ್ಯಾಕ್ಕೆ ಮತ ಪ್ರಮಾಣ ಶೇಕಡ 8 ಕಡಿಮೆಯಾಗಲಿದೆ. ಇದೇ ವೇಳೆ ಕೆಆರ್ಪಿಎಫ್ ಕಮ್ಯುನಿಷ್ಟರು 2ನೇ ಸ್ಥಾನದಲ್ಲಿದ್ದು ಶೇಕಡ 21 ಮತ ಗಳಿಸಲಿದ್ದಾರೆ. ಇನ್ನೂ 14 ಪಕ್ಷಗಳು ಅಭ್ಯರ್ಥಿಗಳನ್ನು 450 ಸ್ಥಾನಗಳ ಚುನಾವಣಾ ಕಣಕ್ಕೆ ಇಳಿಸಿವೆ. ಇವುಗಳು ಗೆಲ್ಲ ಬೇಕಾದರೆ ಪ್ರತಿ ಸ್ಥಾನದಲ್ಲಿ ಕನಿಷ್ಠ 5% ಮತ ಗಳಿಸಬೇಕು ಎಂದು ರಷ್ಯಾದ ಅಧಿಕಾರಿ ಆಂಡ್ರೆ ಟರ್ಚಕ್ ಅಭಿಪ್ರಾಯ ಪಟ್ಟಿದ್ದಾರೆ.
ಚುನಾವಣಾ ಅಕ್ರಮ ಆರೋಪ: ರಷ್ಯಾದಲ್ಲಿಯೂ ಚುನಾವಣಾ ಅಕ್ರಮಗಳಿಗೆ ಕೊರತೆ ಇಲ್ಲ. ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಬಂಧಿತ ತೀವ್ರವಾದಿ ನಾಯಕ ಅಲೆಕ್ಸಿ ನಾವಲ್ನಿ ಅವರ ಪಕ್ಷ ಮತ್ತು ಸಂಘಟನೆಗಳು ಆರೋಪಿಸಿವೆ. ದೂರುಗಳು ಕೂಡ ದಾಖಲಾಗಿವೆ. 4500ಕ್ಕೂ ಹೆಚ್ಚು ಗಂಭೀರ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಯುನೈಟೆಡ್ ಪಾರ್ಟಿಗೆ ಮತ ಚಲಾಯಿಸಲು ಪ್ರತಿಯೊಬ್ಬರಿಗೆ 1,000 ರುಬೆಲ್ (1035.43 ರೂ.) ನೀಡಿದ್ದು ಗಮನಕ್ಕೆ ಬಂದಿದೆ. ಇವುಗಳನ್ನು ಪೊಲೀಸರು ಮತ್ತು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಂಡು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಕಮ್ಯೂನಿಷ್ಟ್ ಪಾರ್ಟಿ ಮುಖ್ಯಸ್ಥ ಗೆನ್ನಡಿ ಝಿವುಗ್ನೋವ್ ಆಗ್ರಹಿಸಿದರು.