ಭಾರತ್ ರೈಸ್ ಮಾರಾಟ ಆರಂಭ: ಕೆಜಿಗೆ 29 ರೂ. ಸಬ್ಸಿಡಿ ದರದಲ್ಲಿ ಲಭ್ಯ

Bharat Brand
Published on

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇ.15ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನಿರಾಳತೆ ನೀಡಲು ಕೇಂದ್ರ ಸರ್ಕಾರ ಮಂಗಳವಾರ ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ಭಾರತ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

5 ಕೆಜಿ ಮತ್ತು 10 ಕೆಜಿ ಪ್ಯಾಕ್​ಗಳಲ್ಲಿ ಲಭ್ಯವಿರುವ ಸಬ್ಸಿಡಿ ಅಕ್ಕಿಯನ್ನು ಬಿಡುಗಡೆ ಮಾಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಸಾಮಾನ್ಯ ಜನರಿಗೆ ದೈನಂದಿನ ಆಹಾರ ಪದಾರ್ಥಗಳು ಕೈಗೆಟುಕುವ ದರದಲ್ಲಿ ಲಭ್ಯ ವಾಗುವಂತೆ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಸಗಟು ಮಧ್ಯಸ್ಥಿಕೆ (ಬೆಲೆಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು) ಅನೇಕ ಜನರಿಗೆ ಪ್ರಯೋಜನವಾಗದಿದ್ದಾಗ, ಬೆಲೆ ಸ್ಥಿರೀಕರಣ ನಿಧಿ (ಪಿಎಸ್​ಎಫ್) ಅಡಿಯಲ್ಲಿ ಈ ಯೋಜನೆ ಪರಿಚಯಿಸಲಾಯಿತು ಎಂದು ಅವರು ತಿಳಿಸಿದರು.

ಪ್ರತಿ ಕೆಜಿ ಭಾರತ್ ರೈಸ್​ನಲ್ಲಿ ಶೇ.5ರಷ್ಟು ಒಡೆದ ಅಕ್ಕಿ ಇರುತ್ತದೆ. ಸರ್ಕಾರದ ಪ್ರಯತ್ನಗಳು ಟೊಮ್ಯಾಟೊ ಮತ್ತು ಈರುಳ್ಳಿ ಬೆಲೆಗಳನ್ನು ಇಳಿಸಲು ಸಹಾಯ ಮಾಡಿದೆ. ಭಾರತ್ ಅಟ್ಟಾ ಮಾರಾಟವನ್ನು ಪ್ರಾರಂಭಿಸಿದಾಗಿನಿಂದ ಕಳೆದ ಆರು ತಿಂಗಳಲ್ಲಿ ಗೋಧಿಗೆ ಬೇಡಿಕೆ ಕಡಿಮೆಯಾಗಿದೆ. ಅದೇ ಪರಿಣಾಮವನ್ನು ಅಕ್ಕಿಯಲ್ಲಿ ನೋಡಲಿದ್ದೇವೆ. ಕೈಗೆಟುಕುವ ದರದಲ್ಲಿ ದೈನಂದಿನ ಅಗತ್ಯಗಳನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿದೆ ಎಂದು ವಿವರಿಸಿದರು.

ಭಾರತ್ ರೈಸ್ ಮಾರಾಟ ಮಾಡುವ 100 ಮೊಬೈಲ್ ವ್ಯಾನ್​ಗಳಿಗೆ ಚಾಲನೆ ನೀಡಿ, ಐವರು ಫಲಾನುಭವಿಗಳಿಗೆ 5 ಕೆಜಿ ಪ್ಯಾಕ್​ಗಳನ್ನು ಸಚಿವರು ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರಾದ ಸಾಧಿ್ವ ನಿರಂಜನ್ ಜ್ಯೋತಿ ಮತ್ತು ಅಶ್ವಿನಿ ಚೌಬೆ, ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮತ್ತು ಭಾರತೀಯ ಆಹಾರ ನಿಗಮ (ಎಫ್​ಸಿಐ) ಸಿಎಂಡಿ ಅಶೋಕ್ ಕೆ ಮೀನಾ ಇದ್ದರು.

ಭಾರತ್ ಬ್ರಾ್ಯಂಡ್ ಹೆಸರಿನಲ್ಲಿ ಗೋಧಿ ಹಿಟ್ಟು, ಬೇಳೆಕಾಳುಗಳು, ಈರುಳ್ಳಿ ಮತ್ತು ಟೊಮ್ಯಾಟೊಗಳನ್ನು ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾರತ್ ರೈಸ್​ಗೂ ಅದೇ ಮಟ್ಟದ ಬೆಂಬಲ ಸಿಗಲಿದೆ. ಗ್ರಾಹಕರ ಪ್ರತಿಕ್ರಿಯೆ ನೋಡಿ ಮಾರಾಟವನ್ನು ಹೆಚ್ಚಿಸಲಾಗುತ್ತದೆ.

| ಪಿಯೂಷ್ ಗೋಯಲ್ ಸಚಿವ

ರಾಜ್ಯದಲ್ಲಿ ಅಕ್ಕಿ ವಿತರಣೆಗೆ ಬಿಎಸ್​ವೈ ಚಾಲನೆ

ಬೆಂಗಳೂರು: ಕೇಂದ್ರ ಸರ್ಕಾರದ ‘ಭಾರತ್ ಬ್ರ್ಯಾಂಡ್​ ಯೋಜನೆ’ಯಡಿ ಪ್ರತಿ ಕೆ.ಜಿ.ಗೆ 29 ರೂ.ನಂತೆ ಭಾರತ್ ಅಕ್ಕಿ ವಿತರಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.

ಡಾಲರ್ಸ್ ಕಾಲೊನಿಯಲ್ಲಿ ಗ್ರಾಹಕರ ಸಹಕಾರ ರಾಷ್ಟ್ರೀಯ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 29 ಕೆ.ಜಿ.ಗೆ ಅಕ್ಕಿ ಪೂರೈಕೆಗೆ ಹಸಿರು ನಿಶಾನೆ ತೋರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಡಿ ನಿತ್ಯವೂ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಭಾರತ್ ಬ್ರಾ್ಯಂಡ್ ಅಡಿಯಲ್ಲಿ ಪ್ರತಿ ಕೆಜಿ ಕಡ್ಲೆಬೇಳೆಗೆ 60 ರೂ., ಗೋಧಿ ಹಿಟ್ಟು 27.50 ರೂ., ಹೆಸರು ಬೇಳೆ 90 ರೂ.ನಂತೆ ವಿತರಿಸಲಾಗುತ್ತಿದೆ. ಈ ಯೋಜನೆಯ ಮುಂದುವರಿದ ಭಾಗವಾಗಿ ಅಕ್ಕಿ ಪ್ರತಿ ಕೆಜಿಗೆ 29 ರೂ.ನಂತೆ ಸರಬರಾಜು ಮಾಡಲಾಗುತ್ತಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಮೋದಿಯವರು ರೂಪಿಸಿದ ಈ ಯೋಜನೆಗೆ ಚಾಲನೆ ನೀಡಲು ಹೆಮ್ಮೆಯುಂಟಾಗಿದೆ. ಮಾತಿಗಿಂತ ಕೃತಿ ಲೇಸು ಎಂದು ಮೋದಿಯವರು ತೋರಿಸಿಕೊಟ್ಟಿದ್ದಾರೆ.

ಸುಳ್ಳು ಭರವಸೆ: ಚುನಾವಣೆ ಪೂರ್ವದಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತವಾಗಿ ಒದಗಿಸುತ್ತೇನೆ ಎಂದು ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಅಕ್ಕಿ ಹೊರತುಪಡಿಸಿ ಒಂದು ಗ್ರಾಂನಷ್ಟು ಅಕ್ಕಿಯನ್ನು ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರ ಬರೀ ಬಾಯಿ ಮಾತಿನಲ್ಲಿ ಭರವಸೆ ನೀಡಿಲ್ಲ, ಕಾಲಹರಣವೂ ಮಾಡಿಲ್ಲ. ಪ್ರತಿ ಕೆಜಿ 29 ರೂ. ಮಾತ್ರ ಪಡೆದು ಎಲ್ಲರಿಗೂ ಅಕ್ಕಿ ವಿತರಿಸಲು ಕ್ರಮಕೈಗೊಂಡಿದೆ ಎಂದು ಯಡಿಯೂರಪ್ಪ ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.

ರಾಜ್ಯದಲ್ಲಿ ಎಲ್ಲೆಲ್ಲಿ ಸಿಗಲಿದೆ ಭಾರತ್ ಅಕ್ಕಿ?

ಎನ್​ಸಿಸಿಎಫ್​ನ ಮುಖ್ಯ ಗೋದಾಮು ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ಸಿದ್ಧತೆ ನಡೆದಿದೆ. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್​ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ. ಅಮೆಜಾನ್, ಫ್ಲಿಪ್​ಕಾರ್ಟ್ ಮುಂತಾದ ಇ ಕಾಮರ್ಸ್ ತಾಣಗಳಲ್ಲೂ ಅಕ್ಕಿ ಮಾರಾಟಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಭಾರತೀಯ ಆಹಾರ ನಿಗಮ (ಎಫ್​ಸಿಐ)ದಿಂದ ಸಂಗ್ರಹಿಸಿದ 5 ಲಕ್ಷ ಟನ್​ಗಳಷ್ಟು ಅಕ್ಕಿಯನ್ನು ಮೊದಲ ಹಂತದಲ್ಲಿ ಎರಡು ಸಹಕಾರಿ ಸಂಘಗಳಿಗೆ ನೀಡುತ್ತದೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಎಎಫ್​ಡಿ) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (ಎನ್​ಸಿಸಿಎಫ್) ಏಜೆನ್ಸಿಗಳು 5 ಕೆಜಿ ಮತ್ತು 10 ಕೆಜಿ ಪ್ಯಾಕ್​ಗಳಲ್ಲಿ ಅಕ್ಕಿಯನ್ನು ಪ್ಯಾಕ್ ಮಾಡುತ್ತವೆ.ಭಾರತ್ ಬ್ರಾಂಡ್​ನ ಅಡಿಯಲ್ಲಿ ತಮ್ಮ ಔಟ್​ಲೆಟ್​ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಇ-ಕಾಮರ್ಸ್ ಪ್ಲಾಟ್​ಫಾಮರ್್​ಗಳ ಮೂಲಕವೂ ಅಕ್ಕಿ ಮಾರಾಟ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net