

ಚಂಡೀಗಢ: ಸ್ಕೇಟಿಂಗ್ ಕಾಲಿಗೆ ಕಟ್ಟಿಕೊಂಡರೆ ನಡೆಯುವುದು ದೂರದ ಮಾತು ನಿಲ್ಲಲೂ ಆಗದಂಥ ಪರಿಸ್ಥಿತಿ ಹೊಸಬರದ್ದು. ಆದರೆ ಅದರಲ್ಲಿಯೇ ವಿವಿಧ ರೀತಿಯ ಸಾಧನೆ ಮಾಡಿದ ಅನೇಕ ಮಂದಿ ಇರುವುದೂ ಅಷ್ಟೇ ನಿಜ.
ಅಂಥದ್ದೇ ಒಂದು ಸಾಧನೆ ಮಾಡಿದ್ದಾಳೆ ಚಂಡೀಗಢದ 12 ವರ್ಷದ ಬಾಲಕಿ ಜಾನ್ಹವಿ ಜಿಂದಾಲ್. ಈ ಮೂಲಕ ಈಕೆಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಸ್ಕೇಟಿಂಗ್ ಕಟ್ಟಿಕೊಂಡು ಡಾನ್ಸ್ ಮಾಡುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿಯೂ ಪಂಜಾಬ್‌ನ ಪ್ರಖ್ಯಾತ ಭಾಂಗ್ರಾ ನೃತ್ಯವಂತೂ ತುಂಬಾ ಕಷ್ಟವೇ ಸರಿ. ಇದಕ್ಕೆ ಸಿಕ್ಕಾಪಟ್ಟೆ ಬ್ಯಾಲೆನ್ಸ್ ಬೇಕು. ಆದರೆ ಅದನ್ನು ಸಾಧಿಸಿ ತೋರಿಸುವ ಮೂಲಕ ಬಾಲಕಿ ಇದೀಗ ದಾಖಲೆಯ ಪುಟ ಸೇರಿದ್ದಾಳೆ.
ಸ್ಕೇಟಿಂಗ್‌ನಲ್ಲಿ ಭಾಂಗ್ರಾ ನೃತ್ಯ ಮಾಡಿರುವ ಅತ್ಯಂತ ಕಿರಿಯಳು ಎಂಬ ಪ್ರಂಶಸೆಗೆ ಈಕೆ ಪಾತ್ರಳಾಗಿದ್ದಾಳೆ.
ಸ್ಕೇಟಿಂಗ್‌ನಲ್ಲಿ ಅತ್ಯಂತ ನುರಿತಿರುವ ಜಾನ್ಹವಿ ಕಳೆದ ವರ್ಷ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾಳೆ. ನ್ಯಾಷನಲ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತಳಾಗಿದ್ದಾಳೆ.
ಅಷ್ಟಕ್ಕೂ ಈಕೆಯೇನೂ ಸ್ಕೇಟಿಂಗ್ ತರಬೇತಿಗೆ ಹೋದವಳಲ್ಲ. ಬದಲಿಗೆ ಈಕೆಯ ತಂದೆ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಸ್ಕೇಟಿಂಗ್ ರೂಢಿ ಮಾಡಿಸಿದ್ದಾರೆ. 8ನೇ ವರ್ಷದಿಂದಲೇ ಸ್ಕೇಟಿಂಗ್ ಕಲಿಕೆ ಪ್ರಾರಂಭಿಸಿರುವ ಜಾನ್ಹವಿ, ಯೂಟ್ಯೂಬ್ ನೋಡುತ್ತಾ ಈಗ ದಾಖಲೆ ಬರೆದಿದ್ದಾಳೆ. ಪಂಜಾಬಿ ಶಿಕ್ಷಕರಿಂದ ಡಾನ್ಸ್ ಕೂಡ ಕಲಿತಿದ್ದು, ಅದನ್ನು ಸ್ಕೇಟಿಂಗ್‌ನಲ್ಲಿ ಅಳವಡಿಸಿಕೊಂಡಿದ್ದಾರೆ.
ಯುಟ್ಯೂಬ್ ನೋಡಿ ಸ್ಕೇಟಿಂಗ್ ಕಲಿತೆ. ಶಿಕ್ಷಕರಿಂದ ಡಾನ್ಸ್ ಕಲಿತೆ. ನೃತ್ಯ ಶಿಕ್ಷಕರೇ ಸ್ಕೇಟಿಂಗ್‌ನಲ್ಲಿ ಈ ಡಾನ್ಸ್ ಕೋರಿಯೋಗ್ರಫಿ ಮಾಡಿದರು ಎನ್ನುತ್ತಾಳೆ ಬಾಲಕಿ. (ಏಜೆನ್ಸೀಸ್)