

ತಿರುವನಂತಪುರ: ಯೂಟ್ಯೂಬ್ನಲ್ಲಿ ಅಶ್ಲೀಲ ವಿಡಿಯೋ ಹಾಕಿದ್ದವನಿಗೆ ಥಳಿಸಿದ ಮೂವರು ಮಹಿಳೆಯರು ನಾಪತ್ತೆಯಾಗಿದ್ದಾರೆ..ಆತ ಜೈಲು ಸೇರಿದ್ದಾನೆ. ಕಾಣೆಯಾದ ಮಹಿಳೆಯರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಈ ಪ್ರಕರಣದ ವಿಚಾರಣೆ ತಿರುವನಂತಪುರಂದ ಸೆಶನ್ ಕೋರ್ಟ್ನಲ್ಲಿ ನಡೆಯುತ್ತಿದ್ದು, ಹಲ್ಲೆ ನಡೆಸಿದ ಆರೋಪಿಗಳಾದ ಭಾಗ್ಯಲಕ್ಷ್ಮೀ, ದಿಯಾ ಸನಾ ಮತ್ತು ಶ್ರೀಲಕ್ಷ್ಮೀ ಅರಾಕಲ್ ಕಣ್ಮರೆಯಾಗಿದ್ದು, ಟ್ರೇಸ್ ಮಾಡಲು ಆಗುತ್ತಿಲ್ಲ ಎಂದು ಸರ್ಕಾರದ ಪರ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಿರುವನಂತಪುರ ನಿವಾಸಿಯಾದ ವಿಜಯ್ ಪಿ. ನಾಯರ್ ಎಂಬಾತ ತನ್ನ ಯೂ ಟ್ಯೂಬ್ ಚಾನಲ್ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ್ದಾನೆಂದು ಆರೋಪಿಸಿ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮೀ, ಸಾಮಾಜಿಕ ಕಾರ್ಯಕರ್ತೆಯರಾದ ದಿಯಾ ಮತ್ತು ಶ್ರೀಲಕ್ಷ್ಮೀ ಸೇರಿ ಆತನ ಮೇಲೆ ಎಣ್ಣೆ ಎರಚಿ, ಥಳಿಸಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಸದಾ ಮಹಿಳೆಯರ ವಿರುದ್ಧ ನಿಂದನಾತ್ಮಕವಾಗಿ ಪೋಸ್ಟ್ಗಳನ್ನು ಹಾಕುವ ವಿಜಯ್ ವಿರುದ್ಧ ಅನೇಕ ಬಾರಿ ಪೊಲೀಸರಿಗೆ ದೂರು ನೀಡಿದರೂ ಅವರು ಕ್ರಮ ಕೈಗೊಂಡಿರಲಿಲ್ಲ ಎಂದು ಈ ಮಹಿಳೆಯರು ಆರೋಪಿಸಿದ್ದರು. ಇದನ್ನೂ ಓದಿ: VIDEO: ಚೀನಿಯರ ಸದೆ ಬಡಿಯಲು ಗಡಿಯಲ್ಲಿ ಸದ್ದು ಮಾಡುತ್ತಿದೆ ‘ಚಿನೂಕ್’
ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಮೂವರು ಮಹಿಳೆಯರು ಮತ್ತು ವಿಜಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಶ್ಲೀಲ, ನಿಂದನಾತ್ಮಕ ವಿಡಿಯೋ ಹಾಕಿದ ಕೇಸ್ ಸೇರಿ, ಇನ್ನೂ ಮೂರ್ನಾಲ್ಕು ಕೇಸ್ಗಳು ವಿಜಯ್ ವಿರುದ್ಧ ದಾಖಲಾಗಿದೆ. ಹಾಗೇ ಹಲ್ಲೆ ಮಾಡಿದ ಆರೋಪದಡಿ ಮೂವರು ಮಹಿಳೆಯರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಕೊಟ್ಟಿಗೆ ಹಾರದಲ್ಲಿ ‘ಕಸ್ತೂರಿ ಮಹಲ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
ನಾಪತ್ತೆಯಾಗಿರುವ ಮಹಿಳೆಯರು ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದೆ. ವಿಜಯ್ಗೆ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಇನ್ನೊಂದು ಕೇಸ್ನಲ್ಲಿ ಸಿಕ್ಕಿಲ್ಲ. ಇದರಿಂದಾಗಿ ಅವನೂ ಜೈಲಿನಲ್ಲಿಯೇ ಇದ್ದಾನೆ.
ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರನ್ನು ನಿಂದಿಸುವುದು, ಅಶ್ಲೀಲ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮದ ಕಾನೂನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. (ಏಜೆನ್ಸೀಸ್)