4,042 ಅಕ್ಕಿಕಾಳುಗಳ ಮೇಲೆ ಭಗವದ್ಗೀತೆಯನ್ನು ಬರೆದ ವಿದ್ಯಾರ್ಥಿನಿ!

Untitled-1
Published on

ಹೈದರಾಬಾದ್​: ಭಗವಾನ್​ ಶ್ರೀಕೃಷ್ಣನ ಸಂದೇಶವಾದ ಭಗವದ್ಗೀತೆಯನ್ನು ನಾನಾ ಭಾಷೆಗಳಲ್ಲಿ, ನಾನಾ ರೀತಿಯಲ್ಲಿ ಪ್ರಕಟಿಸಲಾಗಿದೆ. ಈಗ ಈ ಮಹಾನ್​ ಗ್ರಂಥ ಮತ್ತೊಂದು ವಿಭಿನ್ನ ಶೈಲಿಯಲ್ಲಿ, ಹುಬ್ಬೇರಿಸಿ ನೋಡುವಂಥ ರೀತಿಯಲ್ಲಿ ಮೂಡಿಬಂದಿದೆ.

ಅದೇನೆಂದರೆ ಹೈದರಾಬಾದ್​ನ ಕಾನೂನು ವಿದ್ಯಾರ್ಥಿನಿ ರಾಮಗಿರಿ ಸ್ವರಿಕಾ ಎಂಬಾಕೆ 4,042 ಅಕ್ಕಿಕಾಳುಗಳ ಮೇಲೆ ಭಗವದ್ಗೀತೆಯ ಶ್ಲೋಕಗಳನ್ನು ಬರೆದಿದ್ದಾರೆ. ಈ ಅದ್ಭುತವಾದ ಕಾರ್ಯಕ್ಕೆ ಅವರು 150 ಗಂಟೆಗಳ ಪರಿಶ್ರಮ ಪಟ್ಟಿದ್ದು, ಇದು ತಾವು ರಚಿಸಿರುವ 2 ಸಾವಿರ ಕಲಾಕೃತಿಗಳ ಪೈಕಿ ಅತ್ಯಂತ ವಿಶಿಷ್ಟವಾದದ್ದು ಎಂದು ಹೇಳಿಕೊಂಡಿದ್ದಾರೆ.

ದೇಶದ ಪ್ರಪ್ರಥಮ ಮಹಿಳಾ ಮೈಕ್ರೋ ಆರ್ಟಿಸ್ಟ್ ಎಂದು ಹೇಳಿಕೊಳ್ಳುವ ಇವರು, ನಾಲ್ಕು ವರ್ಷಗಳಿಂದ ಅತಿಚಿಕ್ಕ ವಸ್ತುಗಳ ಮೇಲೆ ಸೂಕ್ಷ್ಮವಾದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಅಕ್ಕಿಕಾಳಿನ ಮೇಲೆ ಗಣೇಶನನ್ನು ಚಿತ್ರಿಸುವ ಮೂಲಕ ತಮ್ಮ ಈ ಮೈಕ್ರೋ ಆರ್ಟ್ ಆರಂಭಿಸಿದ ಇವರು, ಬಳಿಕ ಒಂದೇ ಅಕ್ಕಿಕಾಳಿನ ಮೇಲೆ ಇಂಗ್ಲಿಷ್​ ಅಲ್ಫಾಬೆಟ್​ಗಳನ್ನು ಚಿತ್ರಿಸಿದ್ದಾರೆ. ಚಿಕ್ಕಂದಿನಿಂದಲೂ ಕಲೆ ಹಾಗೂ ಸಂಗೀತದಲ್ಲಿ ಆಸಕ್ತಿ ಇರುವ ಇವರು ಹಾಲು-ಪೇಪರ್​ಗಳನ್ನು ಬಳಸಿಕೊಂಡೂ ಕಲೆಗಳನ್ನು ಮೂಡಿಸಬಲ್ಲವರಾಗಿದ್ದಾರೆ.

ಈ ಹಿಂದೆ ಸಂವಿಧಾನದ ಪೀಠಿಕೆಯನ್ನು ಕೂದಲೆಳೆಯ ಮೇಲೆ ಬರೆದಿದ್ದ ಇವರು, ಅದಕ್ಕಾಗಿ ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್​ ಅವರಿಂದ ಸನ್ಮಾನಕ್ಕೂ ಪಾತ್ರರಾಗಿದ್ದರು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈಕೆ ತಮ್ಮ ಕಲೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವ ಗುರಿ ಇರಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net