

ನಮ್ಮ ಸನಾತನ ಧರ್ಮದಲ್ಲಿ ಭಕ್ತಿ ಪಥವೇ ನಿಜ ಜೀವನದಲ್ಲಿ ಅನುಷ್ಠಾನ ಮಾಡುವ ಅತ್ಯಂತ ಸುಲಭ ಮಾರ್ಗ ಎಂದೇ ಪ್ರಚಲಿತವಾಗಿದೆ. ಪರಮಹಂಸರ ನುಡಿಗಳಲ್ಲಿ ನೋಡುವುದಾದರೆ; ನಾರದೀಯ ಭಕ್ತಿ - ಭಗವಂತನ ನಾಮ ಗುಣಕೀರ್ತನೆ ಮಾಡುವುದು. ಕಲಿಯುಗಕ್ಕೆ ಸೂಕ್ತವಾದುದೇ ವಿನಃ ಕರ್ಮಯೋಗವಲ್ಲ. ಆಸಕ್ತಿ ಇರುವವರೆಗೆ ಸಂಸಾರದಲ್ಲಿ ಕೆಲಸ ಮಾಡಿ. ಆದರೆ ಅದರ ಜೊತೆಗೆ ಭಕ್ತಿಯೂ, ಅನುರಾಗವೂ ಬೇಕು. ಆತನ ನಾಮ ಗುಣಕೀರ್ತನೆ ಮಾಡಿದರೆ ಕ್ರಮೇಣ ಕರ್ಮ ಕ್ಷಯವಾಗುತ್ತದೆ!. ಎಂದಿದ್ದಾರೆ.
ರಾಮಕೃಷ್ಣರು ಭಕ್ತಿಯ ಸಾಕಾರಮೂರ್ತಿಯಾಗಿ ಕಾಣಬರುತ್ತಾರೆ. ಸ್ವಾಮಿ ವಿವೇಕಾನಂದರು ಒಮ್ಮೆ ತಮ್ಮ ಗುರುದೇವನ ಬಗ್ಗೆ ವಿಶ್ಲೇಷಣೆಯನ್ನು ಈ ರೀತಿಯಾಗಿ ತಿಳಿಸುತ್ತಾರೆ. ‘ಭಗವಾನ್ ರಾಮಕೃಷ್ಣರನ್ನು ಬಾಹ್ಯವಾಗಿ ಕಂಡು ಕೇವಲ ಭಕ್ತಿ, ನಾಮ ಸಂಕೀರ್ತನೆ, ಭಗವದ್ ಸೇವೆ, ಭವತಾರಿಣಿಯ ದರ್ಶನ ಇತ್ಯಾದಿ ಅಂದುಕೊಂಡರೆ ಶುದ್ಧ ತಪ್ಪು, ಭಗವಾನರ ಆಂತರ್ಯದಲ್ಲಿ ಶುದ್ಧ ಜ್ಞಾನವನ್ನೇ ಕಾಣಬಹುದು’ ಎಂದು. ನಿಜ, ಈ ಕಲಿಯುಗದಲ್ಲಿ ಸಾಧಾರಣ ಮನುಷ್ಯನೂ ಭಕ್ತಿಮಾರ್ಗದ ಮೂಲಕ ಅಸಾಧಾರಣ ಶಕ್ತಿಯನ್ನು ಪಡೆಯಬಹುದು ಎಂಬುದಕ್ಕೆ ಪರಮಹಂಸರ ಅದ್ಭುತ ಜೀವನವೇ ಉದಾಹರಣೆಯಾಗಿದೆ. ಭಕ್ತಿಮಾರ್ಗದ ಬಗ್ಗೆ ಪರಮಹಂಸರು ಹೀಗೆ ತಿಳಿಸುತ್ತಾರೆ: ಚಿರಕಾಲವೂ ಕರ್ಮಗಳನ್ನು ಸಂಸಾರಿಗಳು ಮಾಡುತ್ತಿರಬೇಕಾದ ಅವಶ್ಯಕತೆಯೇನೂ ಇಲ್ಲ. ಭಗವದ್ ಶಕ್ತಿಯ ಅಡಿದಾವರೆಗಳಲ್ಲಿ ಶುದ್ಧ ಭಕ್ತಿ, ಪ್ರೇಮ ಬೆಳೆದಷ್ಟು ಕರ್ಮಗಳು ಕಡಿಮೆಯಾಗುತ್ತವೆ. ಭಗವಂತನನ್ನು ಸಾಕ್ಷಾತ್ಕರಿಸಿಕೊಂಡರೆ ಕರ್ಮಗಳು ತಾವಾಗಿಯೇ ನಿಂತುಹೋಗುತ್ತವೆ. ಅವರು ಭಗವಂತನನ್ನು ಹೀಗೆ ಬಣ್ಣಿಸುತ್ತಾರೆ: ಆ ಸತ್ ಸ್ವರೂಪ ಬ್ರಹ್ಮ ನಿತ್ಯ, ತ್ರಿಕಾಲದಲ್ಲಿಯೂ ಇದ್ದಾನೆ. ಆದಿ ಅಂತ್ಯ ರಹಿತ, ಆತನನ್ನು ವರ್ಣಿಸಲಾಗುವುದಿಲ್ಲ. ಅವನು ಚೈತನ್ಯ ಸ್ವರೂಪ, ಆನಂದ ಸ್ವರೂಪ ಎಂದು.
ಈ ಕಾಲಘಟ್ಟದಲ್ಲಿ ಭಗವಂತನನ್ನು ಚೈತನ್ಯ ಸ್ವರೂಪ, ಆನಂದ ಸ್ವರೂಪ ಎಂದು ಅರಿಯಲೂ ಸಹ ಈ ಮಾನವರಿಗೆ ಸಮಯವಿಲ್ಲ! ಹಾಗಾಗಿ ಅತ್ಯಂತ ಸುಲಭ, ಸರಳ ಮಾರ್ಗವೆಂದರೆ ಭಕ್ತಿ ಮಾರ್ಗ. ಆದರೆ ಈ ಆಧುನಿಕ ಮಾನವ ಜನಾಂಗಕ್ಕೆ ಬಹು ದೊಡ್ಡ ತೊಂದರೆಯೆಂದರೆ ನಂಬಿಕೆಯಿಲ್ಲದಿರುವುದು. ಈ ಕಾರಣದಿಂದಲೇ ಭಗವನ್ನಾಮ ಜಪದ
ಮಹಿಮೆಯನ್ನು ರಾಮಕೃಷ್ಣರು ತಮ್ಮ ಬೋಧನೆಗಳಲ್ಲಿ ಪದೇ ಪದೇ ತಿಳಿಸುತಿದ್ದರು. ಅವರು ನುಡಿದಿದ್ದು ಹೀಗೆ: ನಾಮ ಜಪದಿಂದ ಭಗವಂತನನ್ನು ಪಡೆಯಬಹುದು. ನಿರ್ಜನ ಪ್ರದೇಶದಲ್ಲಿ ಏಕಾಂತವಾಗಿ ಭಗವನ್ನಾಮ ಜಪ ಮಾಡುತ್ತಾ ಇದ್ದರೆ ಆತನ ಕೃಪೆ ಖಂಡಿತವಾಗಿ ದೊರೆಯುತ್ತದೆ. ಬಳಿಕ ಆತನ ದರ್ಶನ. ಉದಾಹರಣೆಗಾಗಿ ಒಂದು ದೊಡ್ಡ ಮರದ ದಿಮ್ಮಿಯನ್ನು ನೀರಿನಲ್ಲಿ ಮುಳುಗಿಸಿ ಅದನ್ನು ಸರಪಣಿಯಿಂದ ದಡಕ್ಕೆ ಕಟ್ಟಿರುತ್ತಾರೆ ಎಂದಿಟ್ಟುಕೊಳ್ಳಿ. ಆ ಸರಪಣಿಯ ಕೊಂಡಿಯಾದ ಮೇಲೆ ಕೊಂಡಿಯನ್ನು ಹಿಡಿದು ಮುಂದುವರಿಯುತ್ತ ಹೋದಲ್ಲಿ ಕೊನೆಗೆ ಆ ಮರದ ದಿಮ್ಮಿಯನ್ನು ಮುಟ್ಟುವಂತೆ, ನಾಮ ಜಪವನ್ನು ನಿಜ ಅರ್ಥದಲ್ಲಿ ನಿಷ್ಠೆಯಿಂದ, ಶ್ರದ್ಧೆಯಿಂದ, ಭಕ್ತಿಯಿಂದ ಏಕಾಗ್ರತೆಯಿಂದ ಮುಂದುವರಿಸಿಕೊಂಡು ಹೋದಲ್ಲಿ ಈ ಪ್ರಾಪಂಚಿಕ ಜಗತ್ತಿನಲ್ಲಿ ಕ್ರಮೇಣ ಸಂಸಾರ ಜಲದಿಂದ ಪಾರಾಗಬಹುದು. ಹಾಗಾದಾಗ ಅದು ನಿಜವಾದ ಅರ್ಥದಲ್ಲಿ ಭಗವದ್ ದರ್ಶನ ಪಡೆದಂತೆಯೇ ಸರಿ.