ಜೀವನಕ್ಕೆ ಸ್ಪಷ್ಟತೆ, ಸಾರ್ಥಕತೆ ಒದಗಿಸುವ ಭಗವದ್ಗೀತೆ

Srikrishna
Published on

ಡಾ.ಅರುಣ ಕೆ.ಆರ್

ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ದಾರ್ಶನಿಕ ಗ್ರಂಥ ‘ಭಗವದ್ಗೀತೆ’. ವೇದವ್ಯಾಸ ಮುನಿಗಳಿಂದ ರಚಿತವಾದ ಮಹಾನ್ ಗ್ರಂಥ ‘ಮಹಾಭಾರತ’. ಇದರಲ್ಲಿ ಭೀಷ್ಮಪರ್ವವು ಪಾಂಡವ ಮತ್ತು ಕೌರವರ ಮೊದಲ ಹತ್ತು ದಿನಗಳ ಯುದ್ಧವನ್ನು ವರ್ಣಿಸುತ್ತದೆ. ಅದರ ಒಂದು ಭಾಗವೇ (25ರಿಂದ 42ನೇ ಅಧ್ಯಾಯದವರೆಗೆ- 18 ಅಧ್ಯಾಯಗಳು) ‘ಭಗವದ್ಗೀತೆ’. ಇದು ಪ್ರಮುಖವಾಗಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದವಾಗಿದ್ದು, ಯುದ್ಧವು ಏಕೆ ಮತ್ತು ಯಾವಾಗ ಅವಶ್ಯ ಎಂಬುದರ ಜೊತೆಗೆ ಧರ್ಮ (ಕರ್ತವ್ಯ), ಕರ್ಮ (ಕ್ರಿಯೆ) ಹಾಗೂ ಮೋಕ್ಷದ ಪಥಗಳನ್ನು ವಿವರಿಸಿದೆ. ಆ ಪಥದಲ್ಲಿ ಸಾಗಬೇಕಾದ ಪರಿಯನ್ನೂ ತಿಳಿಸಿಕೊಟ್ಟಿದೆ.

ಕೌರವರು ಮತ್ತು ಪಾಂಡವರ ಮಧ್ಯೆ ಯುದ್ಧವೇರ್ಪಟ್ಟಾಗ, ಮೊದಲ ದಿನ ಅರ್ಜುನನು ನೈತಿಕ ಮತ್ತು ಭಾವನಾತ್ಮಕ ಸಂದಿಗ್ಧತೆ, ಹಿಂಸೆ ಮತ್ತು ಮರಣದ ಬಗ್ಗೆ ಹತಾಶೆಯಿಂದಲೂ, ತನ್ನ ಸಂಬಂಧಿಕರ ವಿರುದ್ಧ ಯುದ್ಧದಲ್ಲಿ ಭಾಗಿಯಾಗಬೇಕಾಗಿರುವ ಅನಿವಾರ್ಯತೆಯಲ್ಲಿಯೂ ಇದ್ದಾನೆ. ಯುದ್ಧವನ್ನು ತ್ಯಜಿಸಬೇಕೇ ಎಂದು ಯೋಚಿಸುತ್ತ ವಿಷಾದಭಾವದಿಂದ ಶ್ರೀಕೃಷ್ಣನನ್ನು ಯುದ್ಧದ ಉದ್ದೇಶ, ಹಿಂಸೆಯ ಪರಿಣಾಮಗಳು, ಜೀವನದ ಅರ್ಥವನ್ನು ಕುರಿತು ಕೇಳಿದಾಗ, ಶ್ರೀಕೃಷ್ಣನು ಅರ್ಜುನನ ಎಲ್ಲ ಸಂದೇಹಗಳಿಗೂ ಉತ್ತರಿಸಿದ. ಈ ಉತ್ತರಗಳು ಮತ್ತು ಪ್ರವಚನವು ಭಗವದ್ಗೀತೆಯನ್ನು ರೂಪಿಸಿದೆ. ಮತ್ತು ಈ ಉತ್ತರಗಳು ಕೇವಲ ಅರ್ಜುನನಿಗೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಬೆಳಕು ಒದಗಿಸುವಂಥವು, ಜೀವನದ ಉದ್ದೇಶವನ್ನು ವಿವರಿಸುವಂಥವು.

ಭಗವದ್ಗೀತೆ ರೂಪುಗೊಂಡ ದಿನವು ‘ಮೋಕ್ಷದಾ ಏಕಾದಶಿ’ಯಾಗಿದ್ದು, ಅಂದು ‘ಗೀತಾ ಜಯಂತಿ’ಯನ್ನು ಆಚರಿಸಲಾಗುತ್ತದೆ. ಪ್ರಪಂಚದ ಬೇರಾವ ಗ್ರಂಥವೂ ಈ ರೀತಿಯ ಭಕ್ತಿಪೂರ್ವಕ ಗೌರವವನ್ನು ಪಡೆದಿಲ್ಲ ಎನ್ನಬಹುದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರ ಸಂಭಾಷಣೆಗಳು ಯುದ್ಧವನ್ನೂ ಮೀರಿ ಆಧ್ಯಾತ್ಮಿಕ ವಿಷಯಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿರುವುದಲ್ಲದೆ ನೈತಿಕ ಸಂದಿಗ್ಧಗಳು ಹಾಗೂ ತಾತ್ವಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತವೆ. ಇದು ಆಳವಾದ ಅಧ್ಯಾತ್ಮವೂ ಆಗಿದ್ದು, ಜಿಜ್ಞಾಸುಗಳಿಗೆ ಉತ್ತರ ಒದಗಿಸುವ ಜ್ಞಾನಮಾರ್ಗವೂ ಆಗಿದೆ.

ನಮ್ಮ ಪೂರ್ವಜರ ಕಾಲದಿಂದಲೂ ಭಗವದ್ಗೀತೆ ಯನ್ನು ಸ್ವತಂತ್ರಶಾಸ್ತ್ರ ಗ್ರಂಥವೆಂದೇ ಪರಿಗಣಿಸಲಾಗಿದೆ. ಶಂಕರಾಚಾರ್ಯರು ಹೇಳುವಂತೆ ಇದು ಸಮಸ್ತ ವೇದಾರ್ಥಸಾರ ಸಂಗ್ರಹ. ಭಗವದ್ಗೀತೆಯು ಉಪನಿಷತ್ತುಗಳು ಹೇಳುವ ವಿಚಾರವನ್ನೇ ತಿಳಿಯಾಗಿ, ಎಲ್ಲರಿಗೂ ಮನದಟ್ಟಾಗುವಂತೆ ತಿಳಿಸುತ್ತದೆ. ವಿದ್ವಾಂಸರೊಬ್ಬರ ಅಭಿಪ್ರಾಯದಂತೆ, ‘ಉಪನಿಷತ್ತುಗಳು ಹಸುಗಳ ರೂಪವಾದರೆ, ಭಗವದ್ಗೀತೆಯು ಅದರಿಂದ ಕರೆದುಕೊಂಡ ಹಾಲಿನಂತೆ’. ಮೊದಲೇ ಹೇಳಿದಂತೆ, ಗೀತೆಯು ಮನುಷ್ಯನ ಶೋಕ, ದುಃಖವನ್ನು ನಿವಾರಣೆ ಮಾಡುತ್ತದೆ. ಇದೇ ಗೀತೆಯ ಮುಖ್ಯ ಉದ್ದೇಶ. ಗೀತೆಯ ಅರ್ಥವನ್ನು ಸರಿಯಾಗಿ ಮನವರಿಕೆ ಮಾಡಿಕೊಂಡಾಗ, ಅದನ್ನೇ ಮನಸ್ಸಿನಲ್ಲಿ ಮೆಲುಕು ಹಾಕಿದಾಗ, ನಮ್ಮ ನಮ್ಮ ಅನುಭವದಲ್ಲಿ ಅದನ್ನು ಒಳಹೊಕ್ಕು ನೋಡಿದಾಗ, ಅದರಲ್ಲಿರುವ ಸೂಚನೆಗಳನ್ನು ಬದುಕಿನಲ್ಲಿ ಪ್ರಯೋಗಿಸಲು ಪ್ರಯತ್ನಿಸಿದಾಗ ಗೀತೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಗೊಂದಲಗಳು, ಸಂದೇಹಗಳು ದೂರವಾಗಿ ಬದುಕಿನಲ್ಲಿ ಸಾಗಬೇಕಾದ ದಾರಿಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

ಇಂದು ನಾವೆಲ್ಲ ವ್ಯಕ್ತಿತ್ವ ವಿಕಸನ ತರಬೇತಿ ಎಂದು ಯಾವುದನ್ನು ಹೇಳುತ್ತೇವೆಯೋ, ಅದು ನಮಗೆ ಭಗವದ್ಗೀತೆಯಿಂದಲೇ ದೊರೆಯುತ್ತದೆ. ಬದುಕನ್ನು ಸ್ವೀಕರಿಸುವ ಅಥವಾ ಎದುರಿಸುವ ಛಾತಿಯನ್ನು ಗೀತೆಯು ನಮಗೆ ಒದಗಿಸಿಕೊಡುತ್ತದೆ. ಯಾವುದೇ ಸನ್ನಿವೇಶದಲ್ಲೂ ಸಮಚಿತ್ತದಿಂದ ಹೇಗೆ ಇರಬೇಕು (ಶೀತೋಷ್ಣಸುಖದುಃಖೇಷು ಸಮಃ ಸಂಗ ವಿವರ್ಜಿತಃ -12:18) ಎಂಬುದನ್ನು ಗೀತೆಯಲ್ಲಿ ಸರಳವಾಗಿ ಆದರೆ ಖಚಿತವಾಗಿ ಭಗವಾನ್ ಶ್ರೀಕೃಷ್ಣನು ತಿಳಿಸಿಕೊಟ್ಟಿದ್ದಾನೆ. ಇದೇ ರೀತಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲೂ ನಮ್ಮ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಸ್ಪಷ್ಟ ಮತ್ತು ನಿಖರವಾದ ಉತ್ತರಗಳು ಸಿಗುತ್ತವೆ. ಇದನ್ನು ನಮ್ಮ ಹೆಮ್ಮೆಯ ಡಿ.ವಿ.ಜಿ.ಯವರು ತಮ್ಮ ‘ಜೀವನ ಧರ್ಮ ಯೋಗ’ ಕೃತಿಯಲ್ಲಿ ವಿವರಿಸಿದ್ದಾರೆ. ಅಧ್ಯಾತ್ಮದಲ್ಲಿ ನಿಷ್ಠರಾದವರಿಂದ ಹಿಡಿದು ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಲೋಕಮಾನ್ಯ ತಿಲಕರು, ಮಹಾತ್ಮ ಗಾಂಧಿ, ಅರವಿಂದರು, ಅನಿಬೆಸೆಂಟ್ ಮುಂತಾದವರು ಗೀತೆಯಿಂದಲೇ ಹೊಸ ಬೆಳಕು ಪಡೆದವರು. ಅವರಿಗೆಲ್ಲ ಭಗವದ್ಗೀತೆ ಊರುಗೋಲಾಗಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಇಂತಹ ಪ್ರಭಾವಶಾಲಿಯಾದ ಭಗವದ್ಗೀತೆಯು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಬೆಳಗಬೇಕಾಗಿದೆ.

(ಲೇಖಕರು ಸಂಶೋಧಕಿ ಹಾಗೂ ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net