ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

12 smg 8
Published on

ಶಿವಮೊಗ್ಗ: ಭದ್ರಾವತಿ ನಗರದ ಏಳು ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಪಡಿತರ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್‌ಗೌಡ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

7 ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಣೆ ಮಾಡುವಲ್ಲಿ ಹಾಗೂ ಭದ್ರಾವತಿ ಆಹಾರ ಇಲಾಖೆಯ ಸಹಾಯಕ ನಿರೀಕ್ಷಕಿ ಗಾಯಿತ್ರಿ ಅವರ ಪಾಸ್‌ವರ್ಡ್ ಲಾಗಿನ್‌ನ ಬೆರಳಚ್ಚನ್ನು ಅಕ್ರಮವಾಗಿ ಪಡೆದು ಸಾವಿರಾರು ಟನ್ ಪಡಿತರವನ್ನು ಸ್ವಂತಕ್ಕೆ ಬಳಸಿಕೊಂಡು ಮಾರಾಟ ಮಾಡಿದ್ದಾರೆ ಎಂದು ದೂರಿದರು.

ಈ ವಿಚಾರಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭದ್ರಾವತಿ ಹಳೆನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಎಲ್ಲ 7 ನ್ಯಾಯಬೆಲೆ ಅಂಗಡಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸೀಲ್ ಮಾಡಿ ಸಹಕಾರ ಸಂಘಗಳ ಮುಖಾಂತರ ಪಡಿತರದಾರರಿಗೆ ಪಡಿತರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಅಕ್ರಮವೆಸಗಿರುವ 7 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಿ ಸಂಬಂಧಪಟ್ಟವರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಬೇಕಾದಿತು ಎಂದು ಎಚ್ಚರಿಕೆ ನೀಡಿ ಜಿಲ್ಲಾಡಳಿತದ ಮೂಲಕ ಆಹಾರ ನಾಗರಿಕ ಗ್ರಾಹಕ ವ್ಯವಹಾರಗಳ ಇಲಾಖೆಗೆ ಮನವಿ ಸಲ್ಲಿಸಿದರು. ರಮ ಸಂಕ್ಲಿಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net