ಭದ್ರಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ತಾರತಮ್ಯ ಶೀಘ್ರ ಇಥ್ಯರ್ತ

29 kdr 2
ಕಡೂರು ತಾಪಂ ಸಭಾಂಗಣದಲ್ಲಿ ತುಮಕೂರು ಶಾಖಾ ಕಾಲುವೆ ಕಾಮಗಾರಿ ಮತ್ತು ಭೂಸ್ವಾಧೀನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಗಮದ ಎಂಡಿ ಸಣ್ಣಚಿತ್ತಯ್ಯ ಮಾತನಾಡಿದರು. ಶಾಸಕ ಕೆ.ಎಸ್.ಆನಂದ್, ಬಿ.ಜಿ.ಗೋವಿಂದಪ್ಪ, ಕಾಂತರಾಜು, ಶಿವಪ್ರಕಾಶ್, ಲಮಾಣಿ ಮತ್ತಿತರಿದ್ದರು.
Published on

ಕಡೂರು: ತುಮಕೂರು ಶಾಖಾ ಕಾಲುವೆ ಕಾಮಗಾರಿ ಅನುಷ್ಠಾನಕ್ಕೆ ಕಡೂರು ತಾಲೂಕಿನ ಉಂಟಾಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ 2025ರೊಳಗೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ತಿಳಿಸಿದರು.
ಮಂಗಳವಾರ ಕಡೂರು-ಹೊಸದುರ್ಗ ಕ್ಷೇತ್ರದ ಶಾಸಕರು ಹಾಗೂ ನಿಗಮದ ಇಂಜಿನಿಯರ್‌ಗಳೊಂದಿಗೆ ಶಾಖಾ ಕಾಲುವೆ ಕಾಮಗಾರಿ ಸ್ಥಳದ ವೀಕ್ಷಿಸಿ ನಂತರ ತಾಪಂ ಸಭಾಂಗಣದಲ್ಲಿ ನಡೆದ ಕಾಲುವೆ ಕಾಮಗಾರಿ ಮತ್ತು ಭೂಸ್ವಾಧೀನ ಪ್ರಗತಿ ಕುರಿತು ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಿಗಮದಿಂದ 2025ಕ್ಕೆ ಈ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬರೆದು ಕೊಡಲಾಗಿದೆ. ನಿಗಮದ ಅಧಿಕಾರಿಗಳು ರೈತರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದು ಕೊಳ್ಳಬೇಕು. ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ದರ ನಿಗದಿಮಾಡಲು ಸಚಿವರೊಂದಿಗೆ ಚರ್ಚಿಸಲಾಗುವುದು. ನವೆಂಬರ್ ವೇಳೆಗೆ ಬಾಕಿ ಪರಿಹಾರದ ಹಣ ಬಿಡುಗಡೆಯಾಗಲಿದೆ. ಯಳ್ಳಂಬಳಸೆ ಸಮೀಪದ ಚಿಣ್ಣಾಪುರದ ರೈತರಿಗೆ ಕಡಿಮೆ ಪರಿಹಾರ ದೊರೆತಿರುವ ಬಗ್ಗೆ ಮಾಹಿತಿ ಇದೆ. ಇದು ಕಂದಾಯ ಇಲಾಖೆಯಿಂದ ಉಂಟಾಗಿರುವ ಸಮಸ್ಯೆಯಾಗಿದೆ. ಅಧಿಕಾರಿಗಳು ರೈತ ವಿರೋಧಿ ಧೋರಣೆ ಅನುಸರಿಸಬಾರದು. ಕಡೂರು ತಾಲೂಕಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದರು.
ಒಂದೇ ತಾಲೂಕಿನಲ್ಲಿ ಒಂದು ಎಕರೆಗೆ 1.30 ಕೋಟಿ ದೊರೆತರೆ ಮತ್ತೊಂದು ಕಡೆ 1.19 ಕೋಟಿ ದೊರೆತಿದೆ. ಇದು ಅವೈಜ್ಞಾನಿಕವಾಗಿದ್ದು, ಈಗಾಗಲೇ 123ಜನ ರೈತರು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಕೀಲರನ್ನು ಭೇಟಿ ಮಾಡಿ ಕೇಸ್ ಬೇಗ ಇತ್ಯರ್ಥಗೊಳಿಸಲು ಅಧಿಕಾರಿಗಳು ಪ್ರಯತ್ನಿಸಬೇಕಿದೆ. 15ದಿನಗಳೊಳಗೆ 41ಕೋಟಿ ರೂ ಬಿಡುಗಡೆಗೊಳಿಸಲಾಗುವುದು ಎಂದರು.
ನಿಗಮದ ಮುಖ್ಯ ಇಂಜಿನಿಯರ್ ಶಿವಪ್ರಕಾಶ್, ಅಧಿಕ್ಷಕ ಇಂಜಿನಿಯರ್ ಎಫ್.ಎಚ್.ಲಮಾಣಿ, ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್, ಎಇಇ ಬಿ.ಸಿ.ಪ್ರಕಾಶ್, ಎಂ.ಎಸ್.ಹರ್ಷ, ಎಂ.ಪ್ರಕಾಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net