ಓಡು ಕರೊನಾ ಓಡು... ಪಂಜು ಹಿಡಿದು ಬೀದಿ ಬೀದಿಗಳಲ್ಲಿ ಓಡಾಡಿದ ಗ್ರಾಮಸ್ಥರು..!

Torche 11
Published on

ಭೋಪಾಲ್​: ಸಂಸದ ರಾಮದಾಸ್​ ಅಠಾವಳೆ ಅವರ ಗೋ ಕರೊನಾ ಗೋ (ಹೋಗು ಕರೊನಾ ಹೋಗು) ಪಠಣ ನಂತರ ಮಧ್ಯಪ್ರದೇಶದ ಅಗರ್​ ಮಾಲ್ವಾ ಜಿಲ್ಲೆಯ ಕೆಲವು ಗ್ರಾಮಸ್ಥರು ಕರೊನಾ ವಿರುದ್ಧದ ಹೋರಾಟ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಭಾಗ್​ ಕರೊನಾ ಭಾಗ್​ (ಓಡು ಕರೊನಾ ಓಡು) ಎಂಬ ಘೋಷಣೆಗಳನ್ನು ಕೂಗಿ ಅಚ್ಚರಿ ಮೂಡಿಸಿದರು.

ಗ್ರಾಮಸ್ಥರು ಭಾನುವಾರ ರಾತ್ರಿ ಬೆಂಕಿಯ ಪಂಜನ್ನು ಹಿಡಿದುಕೊಂಡು ಓಡು ಕರೊನಾ ಓಡು ಎಂದು ಘೋಷಣೆ ಕೂಗಿದರು. ಹೀಗೆ ಮಾಡುವದರಿಂದ ತಮ್ಮ ಗ್ರಾಮದ ಮೇಲಿನ ಕರೊನಾ ಪ್ರಭಾವ ಕಡಿಮೆ ಆಗುತ್ತದೆ ಎಂಬುದು ಜನರ ನಂಬಿಕೆ ಆಗಿದೆ. ಇನ್ನು ಘಟನೆ ಅಗರ್​ ಮಾಲ್ವಾ ಜಿಲ್ಲೆಯ ಗಣೇಶ್​ಪುರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.

ವಿಡಿಯೋದಲ್ಲಿ ಕೆಲವು ಗ್ರಾಮಸ್ಥರು ಕೈಯಲ್ಲಿ ಪಂಜನ್ನು ಹಿಡಿದು ಓಡು ಕರೊನಾ ಓಡು ಎಂದು ಘೋಷಣೆ ಕೂಗುತ್ತಾ ಬೀದಿ ಬೀದಿಗಳಲ್ಲಿ ಓಡಾಡಿದ್ದಾರೆ. ಕೊನೆಯಲ್ಲಿ ಗ್ರಾಮದ ಹೊರವಲಯದಲ್ಲಿ ಪಂಜನ್ನು ಗಾಳಿಯಲ್ಲಿ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಅಭ್ಯಾಸದಿಂದ ಕರೊನಾ ನಮ್ಮ ಗ್ರಾಮದಲ್ಲಿ ಹರಡುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.

ಯಾವುದೇ ಸಾಂಕ್ರಾಮಿಕ ಬಂದಾಗಲೂ ನಮ್ಮ ಊರಿನಲ್ಲಿ ಈ ಹವ್ಯಾಸ ಇದೆ ಎಂದು ಗ್ರಾಮದ ಹಿರಿಯರು ಹೇಳಿಕೊಂಡಿದ್ದಾರೆ. ನಮ್ಮ ಗಣೇಶಪುರದಲ್ಲಿ, ಕಳೆದ ಎರಡು-ಮೂರು ದಿನಗಳಿಂದ, ಪ್ರತಿದಿನ ಒಂದು ಸಾವು ವರದಿಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಕೇಂದ್ರ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಮುಂಬೈನ ಚೀನೀ ಕಾನ್ಸುಲ್ ಜನರಲ್ ಟ್ಯಾಂಗ್ ಗುಯೋಕೈ ಮತ್ತು ಬೌದ್ಧ ಸನ್ಯಾಸಿಗಳು ಪ್ರಾರ್ಥನಾ ಸಭೆಯಲ್ಲಿ "ಗೋ ಕರೋನಾ ಗೋ ಕರೋನಾ" ಎಂದು ಜಪಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಇಡೀ ಜಗತ್ತಿನಲ್ಲಿ ಘೋಷಣೆ ವೈರಲ್​ ಆಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net