ನಾಸಾಗೆ ಬಂಪರ್​ ಆಫರ್​ ಕೊಟ್ಟ ಜೆಫ್​ ಬೆಜೋಸ್​: ಚಂದ್ರಯಾನಕ್ಕೆ ಇವರು ಕೊಟ್ಟ ಡಿಸ್ಕೌಂಟ್ ಎಷ್ಟು ಗೊತ್ತಾ?

Jeff
Published on

ವಾಷಿಂಗ್ಟನ್: ಅಮೆಜಾನ್ ಮತ್ತು ಬ್ಲೂ ಒರಿಜಿನ್ ಒಡೆಯ ಜೆಫ್ ಬೆಜೋಸ್ ನಾಸಾಗೆ ಭಾರಿ ಆಫರ್​ ಕೊಟ್ಟಿದ್ದಾರೆ. 2024 ರಲ್ಲಿ ಚಂದ್ರನ ಮೇಲೆ ಮಾನವಸಹಿತ ಪ್ರಯಾಣಕ್ಕೆ ಬೇಕಾದ ಹ್ಯೂಮನ್ ಲ್ಯಾಂಡಿಂಗ್ ಸಿಸ್ಟಮ್ (ಎಚ್‌ಎಲ್‌ಎಸ್) ಒಪ್ಪಂದವನ್ನು ಬ್ಲೂ ಒರಿಜಿನ್ ಜತೆಗೆ ಮಾಡುವುದಾದರೆ, ನಾಸಾಗೆ 2 ಬಿಲಿಯನ್​ ಡಾಲರ್ಸ್ (15,000 ಕೋಟಿ ರೂ.) ಡಿಸ್ಕೌಂಟ್​​ ನೀಡುವುದಾಗಿ ಹೇಳಿದ್ದಾರೆ. ಆದರೆ ಕಳೆದ ಎಪ್ರಿಲ್​ನಲ್ಲೇ 2.9 ಬಿಲಿಯನ್​ ಡಾಲರ್ಸ್​ಗೆ ಎಲನ್​ ಮಸ್ಕ್​ ಅವರೊಂದಿಗೆ ನಾಸಾ ಈ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದವನ್ನು ಸ್ಪೇಸ್‌ಎಕ್ಸ್‌ಗೆ ಮಾತ್ರ ನೀಡಿರುವುದನ್ನು ಖಂಡಿಸಿ ಬ್ಲೂ ಒರಿಜಿನ್ ಮತ್ತು ಡೈನೆಟಿಕ್ಸ್ ಕಂಪನಿ, ಅಮೆರಿಕಾ ಸರ್ಕಾರವನ್ನು ಪ್ರಶ್ನಿಸಿವೆ. ಅಲ್ಲದೇ ಈ ಒಪ್ಪಂದವನ್ನು ತಮ್ಮೊಂದಿಗೆ ಮಾಡಿಕೊಂಡರೆ ಕಂತುಗಳ ಬದಲಾಗಿ ಶಾಶ್ವತವಾಗಿ 2 ಬಿಲಿಯನ್ ಡಾಲರ್​​ಗಳನ್ನು ರದ್ದು ಮಾಡುತ್ತೇವೆ. ಇದರಿಂದ ನಿಮಗೆ ಹಣದ ಕೊರತೆ ಇರುವುದಿಲ್ಲ ಎಂದು ಬೆಜೋಸ್ ನಾಸಾ ಅಧಿಕಾರಿ ಬಿಲ್ ನೆಲ್ಸನ್‌ಗೆ ಪತ್ರ ಬರೆದಿದ್ದಾರೆ.

ಈ ಒಪ್ಪಂದಿಂದ ನಾಸಾಗೆ ಭಾರಿ ಲಾಭ ಎಂದ ಬೆಜೋಸ್
ನಾವು ತಯಾರಿಸುತ್ತಿರುವ ‘ಬ್ಲೂ ಮೂನ್ ಲ್ಯಾಂಡರ್’ ಲಿಕ್ವಿಡ್​​ ಹೈಡ್ರೋಜನ್​ನಿಂದ ಚಲಿಸುವಂತೆ ಮಾಡುತ್ತಿದ್ದೇವೆ. ಈ ಮೂಲಕ ಲ್ಯೂನಾರ್​ ಐಸ್​​ನಿಂದ ಕೂಡ ಇಂಧನವನ್ನು ಒದಗಿಸಿಕೊಳ್ಳುವ ಅವಕಾಶವಿದೆ. ಇದು ಭವಿಷ್ಯದಲ್ಲಿ ಸೌರಮಂಡಲದಿಂದ ಮತ್ತಷ್ಟು ಒಳಗೆ ಪ್ರಯಾಣಿಸಲು ಸಹಾಯ ಮಾಡುತ್ತೆ. ಲ್ಯಾಂಡರ್ ಅನ್ನು ನಮ್ಮ ಸ್ವಂತ ಖರ್ಚಿನಲ್ಲಿ ಭೂಮಿಯ ಕಕ್ಷೆಯಲ್ಲಿ ಟೆಸ್ಟ್​ ಮಾಡುತ್ತೇವೆ. ಅಲ್ಲದೇ ಚಂದ್ರನ ಮಾನವಸಹಿತ ಪ್ರಯಾಣಕ್ಕೆ ಹಣದ ಕೊರತೆಯನ್ನು ನೀಗಿಸಲು ನಾವು ರೆಡಿಯಾಗಿದ್ದೇವೆ. ಈ ಮೂಲಕ ಮಿಷನ್ ಯಾವುದೇ ಅಡೆತಡೆಗಳಿಲ್ಲದೆ ಸಕ್ಸಸ್​​ ಆಗಲಿದೆ ಎಂದು ಬೆಜೋಸ್ ಹೇಳಿದ್ದಾರೆ. ಇದು ಸ್ಪೇಸ್‌ಎಕ್ಸ್‌ನೊಂದಿಗಿನ ಒಪ್ಪಂದದ ಮೇಲೆ ಹೇಗೆ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.

ಸ್ಪೇಸ್‌ಎಕ್ಸ್ ನ 'ಕ್ರೂ ಡ್ರ್ಯಾಗನ್' ಈಗಾಗಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿ ಬಂದಿದೆ. ಬೆಜೋಸ್ ಅವರ ಬ್ಲೂ ಆರಿಜಿನ್ 'ನ್ಯೂ ​​ಶೆಫರ್ಡ್' ಕೂಡ ಪ್ಯಾಸೆಂಜರ್​ ಸಮೇತ ಬಾಹ್ಯಾಕಾಶವನ್ನು ಸುತ್ತಾಡಿ ಬಂದಿದೆ. ಇದು ಏರೋಸ್ಪೇಸ್ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇದು ಪ್ರವಾಸೋದ್ಯಮವಾಗಿ ಮಾರ್ಪಟ್ಟು ಟ್ರಿಲಿಯನ್ ಡಾಲರ್ ವ್ಯವಹಾರವಾಗಿ ಬೆಳೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net