ನಗರ ನಕ್ಸಲರ ಬಗ್ಗೆ ಇರಲಿ ಎಚ್ಚರ; ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Narendra Modi
Published on

ನವದೆಹಲಿ: ರಾಷ್ಟ್ರೀಯ ಏಕತಾ ದಿನದಂದು ದೇಶದ ವಿಪಕ್ಷಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೆಲ ಶಕ್ತಿಗಳು ರಾಜಕೀಯಕ್ಕಾಗಿ ರಾಷ್ಟ್ರೀಯ ಏಕತೆಯನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಗುಜರಾತ್​ನ ನರ್ಮದಾ ಜಿಲ್ಲೆಯ ಕೇವಡಿಯಾ ದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭವ್ಯ ಪ್ರತಿಮೆ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಗರ ನಕ್ಸಲರ ಮೈತ್ರಿಯನ್ನು ಗುರುತಿಸಿ, ಅವರ ವಿರುದ್ಧ ಹೋರಾಡಲು ಜನರಿಗೆ ಕರೆ ನೀಡಿದರು. ದೇಶಗಳ ಮಧ್ಯೆ ಕಂದಕ ಸೃಷ್ಟಿಯಾಗುತ್ತಿದ್ದರೂ, ಅವುಗಳು ಭಾರತಕ್ಕೆ ಹತ್ತಿರವಾಗುತ್ತಿದೆ. ಇದು ಸಾಮಾನ್ಯ ವಿಷಯವಲ್ಲ. ಭಾರತ ಹೊಸ ಇತಿಹಾಸ ಬರೆಯುತ್ತಿದೆ. ತನ್ನ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಿದೆ ಎಂಬುದನ್ನು ಜಗತ್ತು ಗಮನಿಸುತ್ತಿದೆ. ಆದ್ದರಿಂದ ನಾವು ನಮ್ಮ ಏಕತೆ ರಕ್ಷಿಸಿಕೊಳ್ಳಬೇಕು ಎಂದು ಪ್ರಧಾನಿ ಸಂದೇಶ ರವಾನಿಸಿದ್ದಾರೆ.

ಕೆಲವು ವಿಕೃತ ಶಕ್ತಿಗಳು ಭಾರತದ ಉದಯದ ಬಗ್ಗೆ ಚಿಂತಿತಗೊಂಡಿವೆ. ಭಾರತದ ಒಳಗೆ ಮತ್ತು ಅದರ ಹೊರಗೆ ಕೆಲ ಮಂದಿ ಅಸ್ಥಿರತೆ-ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಜಾಗತಿಕ ಹೂಡಿಕೆ ದಾರರಿಗೆ ತಪ್ಪು ಸಂದೇಶ ಕೊಡಬೇಕೆಂಬ ಉದ್ದೇಶ ಹೊಂದಿದ್ದಾರೆ ಮತ್ತು ತಪ್ಪು ಮಾಹಿತಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಭಾರತದ ಸಮಾಜವನ್ನು ಜಾತಿಗಳ ಹೆಸರಲ್ಲಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಭಾರತವನ್ನು ಅಭಿವೃದ್ಧಿಪಡಿಸಲು ಬಯಸು ವುದಿಲ್ಲ. ಸಂವಿಧಾನದ ಹೆಸರಿನಲ್ಲಿ ನಾವು ಈ ನಗರ ನಕ್ಸಲರ ಮೈತ್ರಿಯನ್ನು ಗುರುತಿಸಬೇಕು ಮತ್ತು ಅವರ ವಿರುದ್ಧ ಹೋರಾಡಬೇಕೆಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ವಿಪಕ್ಷದ ಯಾವ ನಾಯಕನ ಹೆಸರನ್ನೂ ಉಲ್ಲೇಖಿಸದಿದ್ದರೂ, ಪರೋಕ್ಷವಾಗಿ ಕಾಂಗ್ರೆಸ್ ಗುರಿ ಮಾಡಿದ್ದು ಸ್ಪಷ್ಟ, ಕಾಂಗ್ರೆಸ್ ನೇತತ್ವದ ಇಂಡಿ ಮೈತ್ರಿಕೂಟ ’ಸಂವಿಧಾನ ಉಳಿಸಿ’ ಘೊಷಣೆಯ ಸುತ್ತ ತನ್ನ ಲೋಕಸಭಾ ಚುನಾವಣಾ ಪ್ರಚಾರ ರೂಪಿಸಿತ್ತು. ಮೇಲಾಗಿ ಜಾತಿ ಜನಗಣತಿ ಜಾರಿ ಮಾಡಿ ಎಂದು ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮಾತುಗಳು ಮಹತ್ವ ಪಡೆದುಕೊಂಡಿದೆ.

PM Modi Diwali

ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ, ಬಿಜೆಪಿ ಸರ್ಕಾರದ ದೂರದೃಷ್ಟಿಯು ರಾಷ್ಟ್ರೀಯ ಏಕತೆಗೆ ಬದ್ಧವಾಗಿದೆ. ಒಂದು ರಾಷ್ಟ್ರ, ಒಂದು ತೆರಿಗೆ ವ್ಯವಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳುವ ಆರ್ಟಿಕಲ್ 370 ರದ್ದುಪಡಿಸಿದ್ದನ್ನು ಉಲ್ಲೇಖಿಸಿದರು.

ಸಂವಿಧಾನದ ಮೇಲೆ ಪ್ರಮಾಣ: ಹಿಂದಿನ ಸರ್ಕಾರಗಳ ತಾರತಮ್ಯ ನೀತಿಗಳು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಿವೆ. ಕಳೆದ 10 ವರ್ಷಗಳಲ್ಲಿ, ಹೊಸ ಆಡಳಿತ ಮಾದರಿಯು ತಾರತಮ್ಯವನ್ನು ಹೋಗಲಾಡಿಸಿದೆ. ನಾವು ಸಬ್ಕಾ ಸಾಥ್ ಸಬ್ಕಾ ವಿಕಾಸದ ಮಾರ್ಗ ಆರಿಸಿದ್ದೇವೆ. ಈ ವಿಧಾನವು ಜನರಲ್ಲಿ ಅಸಮಾಧಾನವನ್ನು ಕೊನೆಗೊಳಿಸಿದೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಅಲ್ಲಿನ ಮುಖ್ಯಮಂತ್ರಿ ಭಾರತದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ದೃಶ್ಯ ಭಾರತೀಯ ಸಂವಿಧಾನ ರಚನಾಕಾರರಿಗೆ ಅಪಾರ ಸಂತೃಪ್ತಿ ನೀಡಿರಬಹುದು. ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಮತ್ತು ಸಂವಿಧಾನ ರಚನಾಕಾರರಿಗೆ ಇದೇ ನಮ್ಮ ವಿನಮ್ರ ಶ್ರದ್ಧಾಂಜಲಿ ಎಂದು ತಿಳಿಸಿದರು.

ಯೋಧರೊಂದಿಗೆ ದೀಪಾವಳಿ: 2014ರಿಂದ ಪ್ರತಿ ವರ್ಷದಂತೆ ಈ ಬಾರಿ ಕೂಡ ಪ್ರಧಾನಿ ಮೋದಿ ದೀಪಾವಳಿಯನ್ನು ದೇಶದ ಯೋಧರೊಂದಿಗೆ ಸಂಭ್ರಮಿಸಿದ್ದಾರೆ. ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಗುಜರಾತ್​ನಲ್ಲಿರುವ ಭಾರತ-ಪಾಕಿಸ್ತಾನ ಗಡಿಗೆ ಸಮೀಪವಿರುವ ಕಛ್​ನ ಲಕ್ಕಿ ನಾಲಾ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿನ ಸರ್ ಕ್ರೀಕ್ ಪ್ರದೇಶದಲ್ಲಿ ಬಿಎಸ್​ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರು. ಭಾರತ್ ಮಾತಾ ಕಿ ಜೈ ಘೊಷಣೆಗಳ ನಡುವೆ ಯೋಧರಿಗೆ ಸಿಹಿ ಹಂಚಿದರು.

ಒಂದು ದೇಶ ಒಂದು ನಾಗರಿಕ ಸಂಹಿತೆ: ಒಂದು ರಾಷ್ಟ್ರ, ಒಂದು ನಾಗರಿಕ ಸಂಹಿತೆಯ ಕುರಿತು ಪ್ರತಿಪಾದಿಸಿದ ಪ್ರಧಾನಿ, ಜಾತ್ಯತೀತ ನಾಗರಿಕ ಸಂಹಿತೆಯ ಅನ್ವೇಷಣೆಯು ತಾರತಮ್ಯ ಕೊನೆಗೊಳಿಸುವ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ. ಏಕತೆಗಾಗಿ ನಡೆಸುತ್ತಿರುವ ನಮ್ಮ ಪ್ರಯತ್ನಗಳ ಅಡಿಯಲ್ಲಿ, ಒಂದು ರಾಷ್ಟ್ರ ಒಂದು ಚುನಾವಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಇದು ದೇಶದ ಪ್ರಜಾಪ್ರಭುತ್ವ ಬಲಪಡಿಸುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಧಿಸುವಲ್ಲಿ ದೇಶ ಹೊಸ ವೇಗವನ್ನು ಪಡೆಯಲಿದೆ. ಅದೇ ರೀತಿ ಭಾರತ ಒಂದು ರಾಷ್ಟ್ರ ಒಂದು ನಾಗರಿಕ ಸಂಹಿತೆಯತ್ತ ಸಾಗುತ್ತಿದೆ. ಅದು ಜಾತ್ಯತೀತ ನಾಗರಿಕ ಸಂಹಿತೆಯಾಗಿದೆ ಎಂದು ತಮ್ಮ ಸರ್ಕಾರದ ಸ್ಪಷ್ಟ ದೃಷ್ಟಿಕೋನವನ್ನು ಮುಂದಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net