ಅಂಚೆ ಪತ್ರವನ್ನು ಕಳುಹಿಸುವ ಮೂಲಕ ವಂಚಿಸುವ ಹೊಸ ತಂತ್ರಗಾರಿಕೆ, ಇರಲಿ ಎಚ್ಚರ!

9CBPcrimeletter
Published on

ಚಿಕ್ಕಬಳ್ಳಾಪುರ: ಮನೆಗೆ ಲಾಟರಿ ಬಹುಮಾನದ ಕೂಪನ್​ ಒಳಗೊಂಡ ಅಂಚೆ ಪತ್ರವನ್ನು ಕಳುಹಿಸುವ ಮೂಲಕ ವಂಚಿಸುವ ಹೊಸ ತಂತ್ರಗಾರಿಕೆಯನ್ನು ದಂಧೆಕೋರರು ಅನುಸರಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಪೊಲೀಸ್​ ಇಲಾಖೆಯು ಸಲಹೆ ನೀಡಿದೆ.

ಹಿಂದೆ ಇ ಮೇಲ್​ ಇಲ್ಲವೇ ಮೊಬೈಲ್​ ಸಂಖ್ಯೆಗೆ ಕಳುಹಿಸಿದ ಲಿಂಕ್​ ಮೂಲಕ ಹಣವನ್ನು ಎಗರಿಸುತ್ತಿದ್ದ ವಂಚನೆಗೆ ಈಗ ಹೊಸ ಸ್ಪರ್ಶ ನೀಡಲಾಗಿದೆ. ಅನಧಿಕೃತ ಕಂಪನಿಗಳ ಹೆಸರಿನಲ್ಲಿ ಲಾಟರಿ ಬಹುಮಾನದ ಕೂಪನ್​ ಅಂಚೆ ಪತ್ರಗಳನ್ನು ನೇರವಾಗಿ ಮನೆಗಳಿಗೆ ಕಳುಹಿಸಲಾಗುತ್ತಿದೆ. ಇದನ್ನು ನಂಬಿ, ಅದರಲ್ಲಿನ ಸಲಹೆ ಸೂಚನೆಗಳಂತೆ ನಡೆದುಕೊಂಡಲ್ಲಿ ಬ್ಯಾಂಕ್​ ಖಾತೆಯಲ್ಲಿನ ಹಣವು ಖಾಲಿಯಾಗಿರುತ್ತದೆ. ಈಗಾಗಲೇ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ವಂಚನೆಯ ಪ್ರಕರಣಗಳು ವರದಿಯಾಗಿವೆ.

*ಪತ್ರದಲ್ಲಿ ಹೇಗೆ ವಂಚನೆ?

ಹೇಗೋ ಜನರ ವಿಳಾಸವನ್ನು ಪಡೆದುಕೊಂಡು ಮನೆಗಳಿಗೆ ನೋಂದಾಯಿತ ಅಂಚೆ ಪತ್ರವನ್ನು ಕಳುಹಿಸಲಾಗುತ್ತಿದೆ. ಇದನ್ನು ತೆರೆದು ನೋಡಿದಾಗ ಅರ್ಜಿ ನಮೂನೆ, ಕಂಪನಿ ಸವಲತ್ತುಗಳ ಮಾಹಿತಿ ಪುಸ್ತಕ, ಕೂಪನ್​ ಇರುತ್ತದೆ. ಇದರಲ್ಲಿ ಪ್ರಮುಖವಾಗಿ ಲಾಟರಿ ಅದೃಷ್ಟವನ್ನು ಪರಿಶೀಲಿಸಿಕೊಳ್ಳಲು ರಹಸ್ಯವಾಗಿ ಮುದ್ರಿತ ಭಾಗದಲ್ಲಿ ಮೊದಲು ಸ್ಕ್ರಆಚ್​ ಮಾಡಲು, ಬಳಿಕ ಅಲ್ಲಿ ಕಾಣುವ ಬಹುಮಾನದ ಹಣವನ್ನು ಪಡೆಯಲು ಕ್ಯೂರ್​ ಕೋಡ್​ ಸ್ಕಾ$ನ್​ ಮಾಡಲು ಹೇಳಲಾಗಿರುತ್ತದೆ.

*ನಂಬಿ ಮೋಸ ಹೋಗದಿರಿ

ಆಸೆ ಆಮಿಷಗಳನ್ನೊಡ್ಡಿ ನಾನಾ ತಂತ್ರಗಾರಿಕೆಯಲ್ಲಿ ಹಣವನ್ನು ಕದಿಯುವ ವಂಚನೆಯ ಪ್ರಕರಣಗಳು ವ್ಯಾಪಕ ನಡೆಯುತ್ತಿವೆ. ಇದನ್ನು ನಂಬಿ ಅಮಾಯಕ ಜನರು ಮೋಸ ಹೋಗುತ್ತಿದ್ದಾರೆ. ಕೊನೆಗೆ ಪೊಲೀಸ್​ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಜಾಣ ಕುರುಡರಂತೆ ಅಪರಿಚಿತರ ಸಲಹೆ ಸೂಚನೆಗಳನ್ನು ಪಾಲಿಸುವುದು ಇಲ್ಲವೇ ಅನಧಿಕೃತ ವ್ಯಕ್ತಿ ಇಲ್ಲವೇ ಕಂಪನಿಗಳೊಂದಿಗೆ ವ್ಯವಹರಿಸುವುದನ್ನು ಬಿಡಬೇಕು ಎಂದು ಪೊಲೀಸ್​ ಇಲಾಖೆ ಸಲಹೆ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ವಿಡಿಯೋವನ್ನು ಬಿಡುಗಡೆಗೊಳಿಸಿ, ಜಾಗೃತಿ ಮೂಡಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net