ಬಾಜಿ ಸವಾಲು ಸ್ವೀಕಾರ: ಫಲಿತಾಂಶ ಬೆಟ್ಟಿಂಗ್ ಜೋರು

tractor
ಕಾಂಗ್ರೆಸ್ ಬೆಂಬಲಿಗ ರವೀಂದ್ರ ಎಂಬುವರ ಸವಾಲು ಸ್ವೀಕರಿಸಿರುವ ಬಿಜೆಪಿ ಬೆಂಬಲಿಗ ಮಂಜುನಾಥ್.
Published on

ಶಿವಮೊಗ್ಗ: ಈ ಬಾರಿ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಶಿವಮೊಗ್ಗ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಕಳೆದ ವಾರ ಶಿಕಾರಿಪುರ ತಾಲೂಕಿನ ಕಲ್ಮನೆಯ ರವೀಂದ್ರ ಎಂಬುವವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗೀತಾ ಶಿವರಾಜ್‌ಕುಮಾರ್ ಗೆಲುವು ನಿಶ್ಚಿತ ಎಂದು ತಮ್ಮ ಹಳೆಯ ಟ್ರಾೃಕ್ಟರ್‌ನ್ನು ಪಣಕ್ಕಿಟ್ಟಿದ್ದರು. ಈಗ ಶಿಕಾರಿಪುರದ ಜಮೀನ್ದಾರ ಮಂಜುನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಖಂಡಿತ ಎಂದು ಎರಡು ಟ್ರಾೃಕ್ಟರ್‌ಗಳನ್ನು ಪಣಕ್ಕಿಟ್ಟಿದ್ದಾರೆ.

ಗೀತಾ ಗೆಲುವು ನಿಶ್ಚಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರವೀಂದ್ರ ಎಂಬುವವರು ತನ್ನ ಹಳೆಯ ಟ್ರಾೃಕ್ಟರ್ ಪಣಕ್ಕಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪಂಥಾಹ್ವಾನ ನೀಡಿದ್ದರು. ಈಗ ಬಿಜೆಪಿ ಅಭಿಮಾನಿ ಮಂಜುನಾಥ್ ಸವಾಲು ಸ್ವೀಕರಿಸಿದ್ದಾರೆ.
ನಾನು ಹಳೆಯ ಅಥವಾ ಹೊಸ ಟ್ರಾೃಕ್ಟರ್ ಪಣಕ್ಕಿಡಲು ಸಿದ್ಧ. ಶಿಕಾರಪುರದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಎಲ್ಲರ ಸಮ್ಮುಖದಲ್ಲೇ ಬೀಗ ನೀಡುವ ಮೂಲಕ ಪಂಥ ಸ್ವೀಕರಿಸೋಣ ಎಂದು ಮಂಜುನಾಥ್ ಮಂಗಳವಾರ ರವೀಂದ್ರ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.
ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಈ ಮಟ್ಟದ ಪಂಥ ನಡೆಯುತ್ತಿದೆ. ಹೀಗಾಗಿ ಚುನಾವಣೆ ಫಲಿತಾಂಶ ಎಲ್ಲರ ಕುತೂಹಲ ಹೆಚ್ಚಿಸಿದೆ. ಪಂಥದಲ್ಲಿ ಯಾರು ಗೆಲ್ಲುತ್ತಾರೆ? ಟ್ರಾೃಕ್ಟರ್ ಕಳೆದುಕೊಳ್ಳುವವರು ಯಾರು? ಎಂಬುದನ್ನು ತಿಳಿಯಲು ಜೂನ್ 4ರವರೆಗೂ ಕಾಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net