

ಬೆಂಗಳೂರು: ಪಕ್ಕದ ತೆಲಂಗಾಣ ಕಾಂಗ್ರೆಸ್ ಸರ್ಕಾರವನ್ನು ತೃಪ್ತಿಪಡಿಸಲು ಆಲ್ಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಿಂದ ಒಂದೂವರೆ ಟಿಎಂಸಿ ಅಡಿ ನೀರು ಕೃಷ್ಣಾ ನದಿಗೆ ಹರಿಸಿ, ರಾಜ್ಯ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನದಿ ನೀರು ಅವಲಂಬಿತ ರಾಜ್ಯದ ರೈತರು, ಕುಡಿಯುವ ನೀರಿಗೆ ಸಮಸ್ಯೆಯೇ ಇಲ್ಲವೆಂಬಂತೆ ಬಿಂಬಿಸಿ ಮೀರ್ ಸಾಧಿಕ್‌ನಂತೆ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ವಂಚಿಸಿದೆ ಎಂದು ಕಿಡಿಕಾರಿದರು.
ಜಲಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ನಿರ್ಧಾರವು ರಾಜ್ಯದ ಹಿತ ಕಡೆಗಣಿಸಿದೆ. ಕನ್ನಡಿಗರು ಅದರಲ್ಲೂ ರೈತರು ಇಂತಹ ದ್ರೋಹವನ್ನು ಕ್ಷಮಿಸುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ಕುಡಿಯುವ ನೀರಿನ ಸಮಸ್ಯೆ ಸಭೆ ಮಾಡುತ್ತಿದ್ದಾರೆ. ಆದರೆ ತೆಲಂಗಾಣಕ್ಕೆ ಒಂದೂವರೆ ಟಿಎಂಸಿ ಅಡಿ ಕೃಷ್ಣಾ ನೀರು ಪೂರೈಕೆ ಹಾಗೂ ಡಿ.ಎಕೆ.ಶಿವಕುಮಾರ್ ನೀಡಿದ ಸೂಚನೆ ಬಗ್ಗೆಯೂ ಮಾತನಾಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.
ಎನ್‌ಎಚ್‌ಎಂ ಸಿಬ್ಬಂದಿಗೆ ಮೋಸ
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಶುಶ್ರೂಷಕ ಸಿಬ್ಬಂದಿಗೆ ಮೊದಲ ಸಂಪುಟ ಸಭೆಯಲ್ಲಿ ಕಾಯಂ ನಿರ್ಧಾರದ ಆಶ್ವಾಸನೆ ನೀಡಿದ ಕಾಂಗ್ರೆಸ್, ಈ ಬೇಡಿಕೆ ಈಡೇರಿಸದೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಬೆಂಗಳೂರು ಆಸ್ಪತ್ರೆಗಳ ವೈದ್ಯರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಹಣವಿಲ್ಲದ ಕಾರಣಕ್ಕೆ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಇ-ಖಾತಾ ನೀಡಲು 12 ಸಾವಿರ ರೂ. ವಸೂಲಿ, ತೆರಿಗೆ ಹೆಚ್ಚಳ, ಹಾಲಿನ ಪ್ರೋತ್ಸಾಹಧನ ಬಾಕಿ ಹೀಗೆ ಎಲ್ಲ ಹಂತದಲ್ಲೂ ಸರ್ಕಾರ ನೆಲಕಚ್ಚಿದೆ ಎಂದು ದೂರಿದರು.