ಭಾರತದ ಗಡಿಯಲ್ಲಿ 40 ಸಾವಿರ ಚೀನಿ ಯೋಧರು!

China
Published on

ನವದೆಹಲಿ: ಪೂರ್ವ ಲಡಾಖ್ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಒಪ್ಪಂದವನ್ನು ಚೀನಾ ಮತ್ತೆ ಉಲ್ಲಂಘನೆ ಮಾಡಿದೆ. ಕೆಲವೆಡೆ ಸೇನೆ ಹಿಂದೆ ಸರಿದಿದ್ದರೂ ಇನ್ನೂ 40 ಸಾವಿರ ಚೀನಾ ಯೋಧರು ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿಯ ಮುಂಚೂಣಿ ಚೌಕಿ ಮತ್ತು ಸೇನಾನೆಲೆಯಲ್ಲಿ ಇದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿಗೆ ಹೆಚ್ಚಿನ ಸೈನಿಕರನ್ನು ರವಾನಿಸುತ್ತಿದೆ.

ಸೇನೆಗೆ ಅಗತ್ಯವಾದ ಶಸ್ತ್ರಾಸ್ತ್ರ, ಸರಕು, ವಾಹನಗಳು ಎಲ್​ಎಸಿಯ ಸನಿಹದಲ್ಲಿ ಇವೆ. ಗಲ್ವಾನ್ ಕಣಿವೆಯ 14, ಗೋಗ್ರಾ, ಹಾಟ್​ಸ್ಪಿ›ಂಗ್ ಗಡಿಯಿಂದ ಚೀನಾ ಸೇನೆ ವಾಪಸು ಹೋಗಿದೆ. ಆದರೆ ಅಲ್ಲಿನ ಸೇನೆ ನಿರ್ವಿುಸಿಕೊಂಡಿರುವ ಮೂಲಸೌಕರ್ಯಗಳು ಇನ್ನೂ ಇವೆ. ಪ್ಯಾಂಗೊಂಗ್ ತ್ಸೊ ಸರೋವರದ ಫಿಂಗರ್ 4ನೇ ಪಾಯಿಂಟ್​ನಿಂದ ತುಕಡಿಗಳು ಪೂರ್ಣ ಪ್ರಮಾಣದಲ್ಲಿ ಹಿಂಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಫಿಂಗರ್ 5ನೇ ಪಾಯಿಂಟ್​ನ ನಿಗಾ ಕೇಂದ್ರವನ್ನು ಚೀನಾ ಸೇನೆ ಹಾಗೆಯೇ ಉಳಿಸಿದೆ. ಈ ಆಯಕಟ್ಟಿನ ಸ್ಥಳಗಳಿಂದ ಹಿಂದೆ ಸರಿದರೆ ಭಾರತದ ಸೇನೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತದೆ ಎಂಬ ಆತಂಕದಿಂದ ಚೀನಾ ಸೇನೆ ಹಿಂದೆ ಸರಿದಿಲ್ಲ ಎಂದು ವಿಶ್ಲೇಷಿಸಲಾಗಿದೆ. ಜುಲೈ 14ರಂದು ನಡೆದ ಕಮಾಂಡರ್ ಹಂತದ ನಾಲ್ಕನೇ ಸುತ್ತಿನ ಮಾತುಕತೆಯಲ್ಲೂ ಸೇನೆ ಹಿಂಪಡೆಯುವಿಕೆ ಬಗ್ಗೆ ವಿಸõತ ಚರ್ಚೆ ನಡೆದಿತ್ತು. ಯಾವ್ಯಾವ ಪಾಯಿಂಟ್​ಗಳಲ್ಲಿ ಸೇನೆ ವಾಪಸಾಗಿದೆ ಮತ್ತು ವಾಪಸಾಗುವ ಹಂತದಲ್ಲಿದೆ ಎಂಬದನ್ನು ರ್ಚಚಿಸಲಾಗಿತ್ತು. ಚೀನಾದ ಕುತಂತ್ರ ಬುದ್ಧಿ ತಿಳಿದಿರುವ ಭಾರತ, ಸೇನೆ ಸಂಪೂರ್ಣವಾಗಿ ಹಿಂಪಡೆದಿರುವ ಕುರಿತು ನಿರಂತರ ಹತ್ತು ದಿನ ಪರಿಶೀಲನೆ ನಡೆಸುವುದಾಗಿ ಹೇಳಿತ್ತು. ಗಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್ ಬಳಿ ಜೂನ್ 15ರಂದು ಘರ್ಷಣೆ ನಡೆದ ಬಳಿಕ ಮೂರು ಸಾರಿ ಸೇನೆಯ ಕಮಾಂಡರ್ ಹಂತದ ಅಧಿಕಾರಿಗಳ ಸಭೆ ನಡೆದಿದೆ. ರಾಜತಾಂತ್ರಿಕ ಮಾರ್ಗವಾಗಿ ಎರಡು ಸಭೆಗಳು ಆಗಿವೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಜುಲೈ 5ರಂದು ಮಾತನಾಡಿದ್ದಾರೆ. ಈ ಸಭೆಯ ನಂತರ ಉಭಯ ಸೇನೆಗಳು ಎಲ್​ಎಸಿಯಿಂದ ಸೇನೆಗಳನ್ನು ಹಿಂಪಡೆಯಲು ಆರಂಭಿಸಿದ್ದವು.

ಭಾರತದಿಂದ 30,000 ಯೋಧರ ನಿಯೋಜನೆ

ಚೀನಾ ಜತೆ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೂರ್ವ ಲಡಾಖ್​ನ ಎಲ್​ಎಸಿ ಬಳಿ ಭಾರತ ಹೆಚ್ಚುವರಿಯಾಗಿ 30 ಸಾವಿರ ಯೋಧರನ್ನು ನಿಯೋಜಿಸಲು ಮುಂದಾಗಿದೆ. ಸಣ್ಣ ತುಕಡಿಗಳು ಹಂತ ಹಂತವಾಗಿ ಗಡಿಯತ್ತ ರವಾನೆಯಾಗುತ್ತಿವೆ. ಅಗತ್ಯ ಪಡಿತರ, ಬೆಚ್ಚಗಿನ ಉಡುಪುಗಳನ್ನೂ ಪೂರೈಸಲಾಗುತ್ತಿದೆ. ಲಡಾಖ್​ನಲ್ಲಿ ಅಕ್ಟೋಬರ್ ಮೊದಲ ವಾರದಿಂದಲೇ ಚಳಿ ಆರಂಭವಾಗುತ್ತದೆ. ಅದಕ್ಕೂ ಮುನ್ನ ಈ ಪ್ರದೇಶಕ್ಕೆ ಸೈನಿಕರನ್ನು ಕಳುಹಿಸಿದರೆ ಚಳಿಗೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ. ಚೀನಾದ ಸಂಭಾವ್ಯ ಅತಿಕ್ರಮಣವನ್ನು ತಡೆಯಬಹುದು ಎಂಬುದು ಭಾರತೀಯ ಸೇನೆಯ ಲೆಕ್ಕಾಚಾರ. ಆರು ತಿಂಗಳಿಗೆ ಆಗುವಷ್ಟು ಪಡಿತರ ಮತ್ತು ಚಳಿಗೆ ರಕ್ಷಣೆ ನೀಡುವ ಉಡುಪು, ಟೆಂಟ್​ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿದೆ. ಈ ಸರಕನ್ನು ರವಾನಿಸಲು 6 ಸಾವಿರ ಟ್ರಕ್​ಗಳನ್ನು ಸಿದ್ಧ ಮಾಡಿಕೊಂಡಿದೆ. ಹೆಚ್ಚುವರಿ ತುಕಡಿಗಳಿಗೆ 20 ಸಾವಿರ ಟನ್ ಪಡಿತರ ಮತ್ತು 15 ಸಾವಿರ ಲೀಟರ್ ಸೀಮೆಎಣ್ಣೆ ಅಗತ್ಯ ಎಂದು ಮೂಲಗಳು ತಿಳಿಸಿವೆ.

ಭೂತಾನ್ ಜತೆಗೆ ಚೌಕಾಸಿ!

ಪೂರ್ವ ಭೂತಾನ್ ಗಡಿ ಭಾಗದಲ್ಲಿನ ಸ್ಯಾಕ್ಟೆಂಗ್ ಅಭಯಾರಣ್ಯ ತನಗೆ ಸೇರಿದ್ದು ಎನ್ನುತ್ತಿರುವ ಚೀನಾ, ಈಗ ಚೌಕಾಸಿಗೆ ಇಳಿದಿದೆ. ಗಡಿ ವಿವಾದ ಪರಿಹಾರಕ್ಕೆ ಭೂತಾನ್ ಮುಂದೆ ಪ್ಯಾಕೇಜ್ ಪರಿಹಾರ ಪ್ರಸ್ತಾಪ ಇರಿಸಿದೆ. ಭೂತಾನ್​ನನ್ನು ತನ್ನತ್ತ ಒಲಿಸಿಕೊಂಡು ಭಾರತದ ಮೇಲೆ ಒತ್ತಡ ಹೇರುವ ಕುತಂತ್ರ ಇದು ಎಂಬ ಅನುಮಾನ ಮೂಡಿದೆ. ಈ ಅಭಯಾರಣ್ಯದ ಒಂದು ತುದಿ ಭಾರತದ ಅರುಣಾಚಲಪ್ರದೇಶಕ್ಕೆ ಹೊಂದಿಕೊಂಡಿದೆ.

ರಾಯಭಾರ ಕಚೇರಿ ಮುಚ್ಚಲು ಚೀನಾಗೆ ಅಮೆರಿಕ ಸೂಚನೆ

ಹ್ಯೂಸ್ಟನ್​ನ ಟೆಕ್ಸಾಸ್ ನಗರದಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಕಚೇರಿಯನ್ನು ಮೂರು ದಿನಗಳಲ್ಲಿ ಮುಚ್ಚುವಂತೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಸೂಚಿಸಿದೆ. ಇದರಿಂದ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಚೀನಾ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ಬೌದ್ಧಿಕ ಆಸ್ತಿ ಮತ್ತು ಅಮೆರಿಕನ್ನರ ಖಾಸಗಿ ಮಾಹಿತಿ ರಕ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಗನ್ ಒರ್ಟಾಗಸ್ ಹೇಳಿದ್ದಾರೆ. ವಿಯೆನ್ನಾ ಸಮಾವೇಶದ ನಿರ್ಣಯದಂತೆ ದೇಶದ ಆಂತರಿಕ ವಿಚಾರದಲ್ಲಿ ವಿದೇಶಗಳ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಇದರ ಆಧಾರದ ಮೇಲೆ ಈ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಮೂರು ದಿನಗಳಲ್ಲಿ ಕಾನ್ಸುಲ್ ಕಚೇರಿಯನ್ನು ಮುಚ್ಚುವಂತೆ ಏಕಪಕ್ಷೀಯವಾಗಿ ನೀಡಿರುವ ಸೂಚನೆಯು ಚೀನಾ ವಿರುದ್ಧ ಅನುಸರಿಸುತ್ತಿರುವ ಕಠಿಣ ಧೋರಣೆಯ ಮತ್ತೊಂದು ಮಜಲು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net