

ಬೇತಮಂಗಲ : ಹೊಸಕೋಟೆಯಿಂದ ಪೆರಂಬದೂರುವರೆಗಿನ ಒಟ್ಟು 262 ಕಿಮೀ ಉದ್ದದ ಎಕ್ಸ್‌ಪ್ರೆಸ್ ಕಾರಿಡಾರ್ ಹೈವೇ ರಸ್ತೆಗೆ ಸಂಬಂಧಿಸಿದಂತೆ ಗುರುವಾರ ಎನ್.ಜಿ.ಹುಲ್ಕೂರು ಬಳಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಏರ್ಪಡಿಸಿದ್ದ ಪರಿಸರ ಸಾರ್ವಜನಿಕ ಸಭೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ರೈತರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮುಂದೆ ಸಂಕಷ್ಟ ತೋಡಿಕೊಂಡರು.
ಎರಡನೇ ಹಂತದ ಯೋಜನೆಗೆ ಸಂಬಂಧಪಟ್ಟಂತೆ ಎನ್.ಜಿ.ಹುಲ್ಕೂರು ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳ ಹಾಗೂ ಮುಳಬಾಗಿಲು ತಾಲೂಕಿನ ಎರಡು ಗ್ರಾಮಗಳಲ್ಲಿ ರಸ್ತೆ ವಿಸ್ತರಣೆಗಾಗಿ ಭೂಮಿ ಕಳೆದುಕೊಳ್ಳಲಿರುವ ಒಟ್ಟು 85 ರೈತರು ಪರಿಹಾರ ಹಣ ಇನ್ನೂ ಕೈಸೇರಿಲ್ಲ. ನಮಗೆ ಕಡಿಮೆ ಹಣ ನಿಗದಿ ಮಾಡಿದ್ದಾರೆ. ನಮ್ಮ ಜೀವನಕ್ಕೆ ದಾರಿ ತೋರಿಸಿ ಅಥವಾ ಭೂಮಿ ನೀಡಿ ಎಂದು ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
ಎನ್.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಗಿಡ ಮರಗಳು ರಸ್ತೆಗಾಗಿ ನೆಲಕ್ಕುರುಳುತ್ತವೆ. ಅದಕ್ಕೆ ಪರ್ಯಾಯವಾಗಿ ಹೆದ್ದಾರಿ ಪ್ರಾಧಿಕಾರ ಮರ ಬೆಳೆಸಲು ಆದ್ಯತೆ ನೀಡಬೇಕು. ಪಂಚಾಯಿತಿಗೆ ಸೇರಿದ ಬೋರ್‌ವೆಲ್ ಮತ್ತು ಇತರ ಆಸ್ತಿ ನಾಶವಾಗಲಿದ್ದು, ಇದಕ್ಕೆ ಪರಿಹರ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಸೆಲ್ವಮಣಿ ಮಾತನಾಡಿ, ರೈತರು ಪಿ.ನಂಬರ್, ಪೌವತಿ, ವರದು , ದಾಖಲೆ ತಿದ್ದುವಿಕೆ ಸೇರಿ ಯಾವುದೇ ಸಮಸ್ಯೆ ಇದ್ದರೂ ಭೂಮಿ ಕಳೆದುಕೊಳ್ಳುವ ರೈತರಿಗೆ ಸ್ವಲ್ಪ ನಿಧಾನವಾದರೂ ಹಣ ಖಂಡಿತ ನೀಡುತ್ತೇವೆ ಎಂದು ಭರವಸೆ ನೀಡಿದರು. ಮುಖಂಡ ಎಂ.ಬಿ.ಎ.ಕೃಷ್ಣಪ್ಪ ಮತ್ತಿತರರು ಇದ್ದರು.
ಹೆಚ್ಚುವರಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ : ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಕಡಿಮೆ ಪರಿಹಾರ ನೀಡಲಾಗುತ್ತಿದೆ ಎಂದು ಅನಿಸಿದರೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಹೆಚ್ಚುವರಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಸೂಕ್ತ ಪರಿಹಾರ ನೀಡುವುದಾಗಿ ಡಾ.ಸೆಲ್ವಮಣಿ ಹೇಳಿದರು.