

ಕೋಲಾರ: ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ಸಾಗಿ ಭವ್ಯ ಭಾರತ ನಿಮಾರ್ಣಕ್ಕೆ ಪ್ರತಿಯೊಬ್ಬರು ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕರೆ ನೀಡಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ 155ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಹಿರಿಯರು ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಬೇಕು. ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ, ಡಾ.ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ಗಾಂಧೀಜಿ, ಮೌಲಾನಾ ಅಜಾದ್, ಲಾಲ್ ಬಹಾದೂರ್ ಶಾಸ್ತ್ರಿ ಹೀಗೆ ಅನೇಕರು ಜೀವವನ್ನೇ ಮುಡಿಪಾಗಿಟ್ಟು ಬ್ರೀಟಿಷರ ವಿರುದ್ಧ ಹೋರಾಡಿ, ಸ್ವಾತಂತ್ರ$್ಯ ತಂದುಕೊಟ್ಟಿದ್ದಾರೆ. ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಿದ್ದಾರೆ. ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು, ಸ್ವಾರ್ಥಕ್ಕೆ ಬಳಕೆಯಾಗಬಾರದು. ನಾವೆಲ್ಲರೂ ಭಾರತಾಂಭೆಯ ಮಕ್ಕಳು ಎಂಬುದನ್ನು ಅರಿತು ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.
ಗಾಂಧೀಜಿ ಅವರ ಪ್ರತಿಯೊಂದು ವಿಚಾರವನ್ನೂ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉಲ್ಲೇಖ ಮಾಡಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಿದ್ದಾರೆ. ಹಾಗಾಗಿ ಗಾಂಧೀಜಿಯಂತೆ ಅಹಿಂಸಾ ಮಾರ್ಗದಲ್ಲಿ ಸಾಗುವ ಮೂಲಕ ಭವ್ಯ ಭಾರತ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಶಿಕ್ಷಣ ಇಲ್ಲದ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಕನಸ್ಸು ಹೊಂದಿರುತ್ತಾರೆ. ಯಾರಯಾರ ಹಣೆಯಲ್ಲಿ ದೇವರು ಏನನ್ನು ಬರೆದಿರುತ್ತಾನೊ ಗೊತ್ತಾಗುವುದಿಲ್ಲ. ಬಡವನೂ ಐಎಎಸ್, ಐಪಿಎಸ್, ಶಾಸಕ, ಎಂಎಲ್ಸಿ, ಮಿನಿಸ್ಟರ್ ಆಗಬಹುದು. ಉತ್ತಮ ಫಲಿತಾಂಶಗಳಿಸಿದಾಗ ತಂದೆ-ತಾಯಿಗೆ ಸಲ್ಲಿಸುವ ಗೌರವ, ಆ ಸಂದರ್ಭದಲ್ಲಿ ಅವರ ಸಂತೋಷವನ್ನು ಎಂದೂ ಕಾಣಲು ಸಾಧ್ಯವಾವುದಿಲ್ಲ ಎಂದರು.
ಭವನಕ್ಕೆ ಜಾಗ ಕಲ್ಪಿಸುವ ಭರವಸೆ
ಗಾಂಧಿ ಭವನ ಸಮಸ್ಯೆ ಬಗೆಹರಿಸಲು ಬದ್ಧ. ಜಾಗದ ಸಮಸ್ಯೆ ಇದ್ದು, ನಗರಾಭಿವೃದ್ಧಿ ಇಲಾಖೆಯಿಂದ ಉಚಿತವಾಗಿ ಜಾಗ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಸಚಿವ ಸಂಪುಟ ಸಭೆಯಲ್ಲಿ ಜಾಗ ವಿಚಾರ ಇಟ್ಟು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
ಹೋರಾಟದ ಫಲ ನೆಮ್ಮದಿಯ ಬದುಕು
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಗಾಂಧೀಜಿ ದೇಶಕ್ಕೆ ಮಾಡಿರುವ ಸೇವೆ ನೆನಪಿಸಿಕೊಳ್ಳುತ್ತಿದ್ದೇವೆ. ಈಚೆಗೆ ಜಯಂತಿ ಸರಿಯಾಗಿ ಮಾಡುತ್ತಿಲ್ಲ. ಚುನಾವಣಾ ನೀತಿ ಸಂಹಿತೆಯಿಂದಾಗಿ ಅದ್ದೂರಿಯಿಂದ ಆಚರಿಸಲು ಸಾಧ್ಯವಾಗಿಲ್ಲ. ಮುಂದೆ ಅದ್ದೂರಿಯಿಂದ ಆಚರಿಸೋಣ. ಗಾಂಧೀಜಿ ಅವರ ಹೋರಾಟದ ಪ್ರತಿಫಲವಾಗಿ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಪೂರ್ವ ಕಾಲೇಜಿನ ಗೋರಮ್ಮ, ಬೆಗ್ಲಿ ಹೊಸಹಳ್ಳಿ ಪ್ರೌಢ ಶಾಲೆಯ ಸೃಷ್ಟಿ, ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ ಅಮೂಲ್ಯ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಬಂತೇಜಿ ಗೋಪಾಲ್, ಸಂಸದ ಎಂ.ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜ್, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ತಹಸೀಲ್ದಾರ್ ನಯನಾ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚೇತನ್ ಕುಮಾರ್, ಕೌಸಲ್ಯಾ, ಮಂಜೇಶ್ ಹಾಜರಿದ್ದರು.