

ಬೆಂಗಳೂರು: ಸಂಸ್ಥೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಣಕ್ಕೆ ಬೇಡಿಕೆ ಇಟ್ಟು ೩.೫ ಲಕ್ಷ ರೂ. ಹಣ ಪಡೆಯುತ್ತಿದ್ದ ಬೆಸ್ಕಾಂ ಅಧಿಕಾರಿ ಸೇರಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜಯನಗರ ಉಪ ವಿಭಾಗದ ಎಸ್-೧ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ) ಧನಂಜಯ್ಯ ಮತ್ತು ಖಾಸಗಿ ಮಧ್ಯವರ್ತಿ ಸೈಯದ್ ನಿಜಾಮ್ ಬಂಧಿತ ಆರೋಪಿಗಳು.
ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಭರತ್ ಕುಮಾರ್ ಎಂಬುವವರು ಸಂಸ್ಥೆಯೊಂದಕ್ಕೆ ೨೩ ಕೆ.ವಿ ಹೆಚ್ಚುವರಿ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಜು.೧೯ ರಂದು ಜಯನಗರ ಸಬ್ ಡಿವಿಜನ್‌ನ ಬೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ವಿದ್ಯುತ್ ಸಂಪರ್ಕ ಕಲ್ಪಿಸಲು ಎಇಇ ೧೩ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಕಂಟ್ರ್ಯಾಕ್ಟರ್ ಭರತ್ ಕುಮಾರ್ ಈ ಬಗ್ಗೆ ಬೆಂಗಳೂರು ಲೋಕಾಯುಕ್ತ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಕೆ.ವೆಂಕಟೇಶ್ ಮತ್ತು ವಿಜಯಕೃಷ್ಣ ನೇತೃತ್ವದ ತಂಡ ಆರೋಪಿ ಧನಂಜಯ್ಯ ಮಧ್ಯವರ್ತಿ ಸೈಯಾದ್ ಮೂಲಕ ೩.೫ ಲಕ್ಷ ರೂ. ಹಣ ಪಡೆಯುವಾಗ ದಾಳಿ ನಡೆಸಿ ಸಾಕ್ಷಿ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ೩.೫ ಲಕ್ಷ ರೂ.ಅನ್ನು ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.