ಹುಣಸೂರು : ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ ಸೇರಿದಂತೆ ಪ್ರಸ್ತುತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಸಕಾಲದಲ್ಲಿ ಶಿಸ್ತುಬದ್ಧವಾಗಿ ಪೂರ್ಣಗೊಳಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಸೂಚಿಸಿದರು. 2024-25ನೇ ಸಾಲಿನ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಮೇ.29ರಿಂದ ಆರಂಭಗೊಳ್ಳುತ್ತಿರುವ ಹಿನ್ನ್ನೆಲೆಯಲ್ಲಿ ಮಂಗಳವಾರ ನಗರದ ಗುರುಭವನದಲ್ಲಿ ಕಿರಿಯ ಮತ್ತು ಹಿರಿಯಪ್ರಾಥಮಿಕ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮುಖ್ಯಶಿಕ್ಷಕರಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇ. 29ರಂದು ಶಾಲೆಯ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಂಡು ಇಡೀ ಶಾಲಾ ಆವರಣವನ್ನು ಸ್ವಚ್ಛ ಗೊಳಿಸುವ ಕಾರ್ಯ ನಡೆಸಬೇಕು. ಮೇ.30ರಂದು ಎಸ್‌ಡಿಎಂಸಿ ಶಿಕ್ಷಕವೃಂದ ಮತ್ತು ಗ್ರಾಮದ ಮುಖಂಡರೊಂದಿಗೆ ಸಭೆ ಆಯೋಜಿಸಿ ಪ್ರಸ್ತುತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸಿ, ಎಲ್ಲರ ಸಹಕಾರ ಕೋರಬೇಕು ಎಂದರು. 31ರಿಂದ ಪಾಠ ಆರಂಭಿಸಿ: ಮೇ.31ರಿಂದ ಪಾಠಗಳು ಆರಂಭಗೊಳ್ಳಬೇಕು. ಎಲ್ಲವೂ ಈಗಾಗಲೇ ತಿಳಿಸಿರುವಂತೆ ಶಿಸ್ತುಬದ್ಧವಾಗಿ ನಡೆಯಬೇಕು, ಮೂಲಸೌಕರ್ಯಗಳ ನಿರ್ವಹಣೆ, ಶಾಲಾ ಆವರಣದಲ್ಲಿ ಮರಗಳು, ವಿದ್ಯುತ್ ಕಂಬಗಳು, ವಿದ್ಯುತ್ ತಂತಿ ಹಾದುಹೋಗಿದ್ದರೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ, ಅಪಾಯಗಳನ್ನು ತಡೆಗಟ್ಟಬೇಕು ಎಂದವರು ಸೂಚಿಸಿದರು.