

ಕರೊನಾ ವೈರಸ್ನ ಗಂಭೀರ ಪರಿಣಾಮದ ಬಗ್ಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಲಾಕ್ಡೌನ್ ಇದೆ, ಹೊರಗೆ ಓಡಾಡಬೇಡಿ..ಹಾಗೆ ಹೊರಗೆ ಓಡಾಡುವುದರಿಂದ ಅಪಾಯವನ್ನು ನೀವೇ ತಂದುಕೊಳ್ಳುತ್ತೀರಿ ಎಂಬರ್ಥದ ಪೋಸ್ಟ್ಗಳನ್ನು ಬಹುದಿನಗಳಿಂದಲೂ ಹಾಕುತ್ತ ಬರುತ್ತಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಜನರ ಓಡಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದಲ್ಲ ಒಂದು ನೆಪವನ್ನೊಡ್ಡಿ ಜನರು ಸಂಚರಿಸುತ್ತಲೇ ಇದ್ದಾರೆ. ಮೇ 3ರ ಬಳಿಕ ಲಾಕ್ಡೌನ್ನಲ್ಲಿ ಸಡಿಲಿಕೆ ಇದ್ದರೂ ಬೆಂಗಳೂರಿನಲ್ಲಿ ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
ಇಷ್ಟಾದರೂ ಈಗ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಮಧ್ಯೆ ಬೆಂಗಳೂರು ಸಿಟಿ ಪೋಲೀಸರು ಒಂದು ವಿಭಿನ್ನ ಟ್ವೀಟ್ ಮಾಡಿದ್ದಾರೆ.
'ನಿಮಗೆ ಫೋನ್ ಮಾಡುವ ಅಪರಿಚಿತರೆಲ್ಲ ಬೆಳದಿಂಗಳ ಬಾಲೆ ಆಗಿರೋದಿಲ್ಲ..ಎಚ್ಚರ' ಎಂದು ಅನಂತ್ ನಾಗ್ ಅವರು ಫೋನ್ ಹಿಡಿದುಕೊಂಡಿರುವ ಫೋಟೋದ ಮೇಲೆ ಬರೆದು, ಅದನ್ನು ಪೋಸ್ಟ್ ಮಾಡಿದ್ದಾರೆ. ಹಾಗೇ ಹೌದು..ಸ್ವಾಮಿ ! ಎಂದು ಕ್ಯಾಪ್ಷನ್ ಕೂಡ ಬರೆದು, #StayHomeStaySafe ಎಂಬ ಹ್ಯಾಷ್ಟ್ಯಾಗ್ ಕೊಟ್ಟಿದ್ದಾರೆ.
ಅರೆ, ಇದೆಂಥಾ ಟ್ವಿಟರ್ ಪೋಸ್ಟ್ ಎಂದು ಗೊಂದಲ ಬೇಡ. ಕರೊನಾ ಸೋಂಕು ಇರುವವರಿಗೆ ಆರೋಗ್ಯ ಇಲಾಖೆಯಿಂದ ಅಪರಿಚಿತ ನಂಬರ್ನಲ್ಲಿ ಫೋನ್ ಮಾಡಲಾಗುತ್ತದೆ. ಹಾಗೇ ನೀವು ಬೇಕಾಬಿಟ್ಟಿ ಓಡಾಡುತ್ತಿದ್ದರೆ ನಿಮಗೂ ಅಪರಿಚಿತ ನಂಬರ್ನಿಂದ ಕರೆ ಬರುತ್ತದೆ. ಅದು ಬೆಳದಿಂಗಳ ಬಾಲೆ ಆಗಿರುವುದಿಲ್ಲ. ಕರೊನಾ ಸೋಂಕಿಗೆ ಸಂಬಂಧಿಸಿದ ಕರೆ ಆಗಿರುತ್ತದೆ ಎಂದು ಸೂಕ್ಷ್ಮವಾಗಿ ಸಿಟಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ !