

ಬೆಂಗಳೂರು: ಹೆತ್ತ ತಾಯಿಯನ್ನು ಕೊಂದ ಮಗಳು, ಶವವನ್ನು ಸೂಟ್ಕೇಸ್ನಲ್ಲಿಟ್ಟು ಪೊಲೀಸ್ ಠಾಣೆಗೆ ಹೊತ್ತು ತಂದ ಆಘಾತಕಾರಿ ಘಟನೆ ನಗರದ ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೀವಾ ಪಾಲ್ (70) ಮಗಳಿಂದಲೇ ಕೊಲೆಯಾದ ದುರ್ದೈವಿ. ಸೆನಾ ಸೇನ್ (39) ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗಳು. ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್, ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದರಂತೆ.
ನಿನ್ನೆ (ಜೂ. 12) ಮುಂಜಾನೆ ತಾಯಿಗೆ 20 ನಿದ್ರೆ ಮಾತ್ರೆಯನ್ನು ಸೆನಾಲಿ ನುಂಗಿಸಿದ್ದಾಳೆ. ಬಳಿಕ ತಾಯಿ ಹೊಟ್ಟೆ ನೋವು ಅಂದಾಗ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಟ್ರ್ಯಾಲಿ ಸೂಟ್ಕೇಸ್ನಲ್ಲಿ ತಾಯಿಯ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಸ್ಟೇಷನ್ಗೆ ಹೊತ್ತು ತಂದಿದ್ದಾಳೆ.
ಬಿಳೇಕಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ನಿಂದ ತಾಯಿಯ ಮೃತದೇಹವನ್ನು ಹೊತ್ತು ಮೈಕೊಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ. ಸೆನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ದಂಗಾದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆನಾಲಿ ಸೇನ್ಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)