

ಬೆಂಗಳೂರು: ಪರಿಸರ ಸ್ನೇಹಿ, ತ್ಯಾಜ್ಯ ಮುಕ್ತ ಬೆಂಗಳೂರು ಪರಿಕಲ್ಪನೆಯಡಿ ರೂಪುಗೊಂಡ ತ್ಯಾಜ್ಯ ಆಧಾರಿತ ವಿದ್ಯುತ್ ಉತ್ಪಾದನೆ ಕನಸು ನನಸಾಗುವ ದಿನಗಳು ಹತ್ತಿರವಾಗಿವೆ. ಬಿಡದಿ ವಿದ್ಯುತ್ ಘಟಕ ಶೀಘ್ರ ಕಾರ್ಯಾರಂಭಿಸುವ ಸಕಾರಾತ್ಮಕ ಲಕ್ಷಣಗಳು ಗೋಚರಿಸಿವೆ.
ಬಿಡದಿ ಬಳಿ ತ್ಯಾಜ್ಯ ಆಧಾರಿತ ವಿದ್ಯುತ್ ಉತ್ಪಾದನೆ ಘಟಕ ನಿರ್ಮಾಣ ಘಟಕದ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೆರಡು ಮೂರು ತಿಂಗಳೊಳಗೆ ಕಾರ್ಯಾಚರಣೆಗೆ ಸಜ್ಜಾಗಲಿದೆ ಎಂಬ ಮಹತ್ವದ ಮಾಹಿತಿಯನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಹಂಚಿಕೊಂಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವದಡಿ 11.5 ಮೆಗಾ ವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದ್ದು, ಕೆಪಿಸಿಎಲ್ ಪ್ರಾರಂಭಿಕ ಬಂಡವಾಳವಾಗಿ 240 ಕೋಟಿ ರೂ. ಹೂಡಿಕೆ ಮಾಡಿದೆ.
ಬೆಂಗಳೂರಿನಲ್ಲಿ ಪ್ರತಿದಿನ ತಲಾ ಎರಡು ಸಾವಿರ ಟನ್ ಒಣ ಮತ್ತು ಹಸಿ ಕಸ ಉತ್ಪಾದನೆಯಾಗುತ್ತದೆ. ಇದರಲ್ಲಿ ಪ್ರತಿದಿನ 600 ಟನ್ ಒಣಕಸ ಬಳಸಿಕೊಂಡು 11.5 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶವಿದೆ. ಸಹಭಾಗಿತ್ವದ ಯೋಜನೆಯಾಗಿರುವ ಕಾರಣ ಸಾಧಕ-ಬಾಧಕ ಅರಿತುಕೊಂಡು ವಿಸ್ತರಣೆಗೆ ಕೈಹಾಕಬೇಕಾಗುತ್ತದೆ.
ಘಟಕ ಕಾರ್ಯಾರಂಭಿಸಿದ ನಂತರ ಕೇಂದ್ರ ಸರ್ಕಾರ ಸಹಾಯಧನ ನೀಡಲಿದೆ. ನಂತರ ಸೂಕ್ತ ಎನಿಸಿದರೆ ಬಿಡದಿ ಸ್ಥಾವರದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ವಿಸ್ತರಿಸಲಾಗುವುದು.
ಜಲ, ಪವನ, ಸೌರ ಮತ್ತು ಶಾಖೋತ್ಪನ್ನಕ್ಕಿಂತ ತ್ಯಾಜ್ಯ ಆಧಾರಿತ ಉತ್ಪಾದನಾ ವೆಚ್ಚ ಜಾಸ್ತಿ. ಪ್ರತಿ ಯೂನಿಟ್‌ಗೆ ಎಂಟು ರೂ. ವೆಚ್ಚವಾಗಲಿದೆ.
ಆದರೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಹಿತ, ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆ ನೆಲೆಯಲ್ಲಿ ಈ ಘಟಕವನ್ನು ಸರ್ಕಾರ ನಿರ್ಮಿಸುತ್ತಿದೆ. ‘ವೆಲ್‌ೇರ್ ಸ್ಟೇಟ್’ ಕರ್ತವ್ಯ ಮತ್ತು ಸಾಮಾಜಿಕ ಬದ್ಧತೆಗೆ ನಿದರ್ಶನವಾಗಲಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.