

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ರಾಜ್ಯ ರಾಜ್ಯಧಾನಿಯಲ್ಲಿ ಬಿರುಸಿನ ಮಳೆ ಎಂದಿನಂತೆ ಮುಂದುವರೆದಿದೆ. ಇಂದು ಮಧ್ಯಾಹ್ನವೇ ಸಂಜೆಯಂತೆ ಮೋಡ ಕವಿದ ವಾತಾವರಣ ಮೂಡಿದ್ದು, ಜನಸಾಮಾನ್ಯರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಟ್ಟುಬಿಡದೆ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ತತ್ತರಿಸಿರುವ ಬೆಂಗಳೂರಿನ ಜನತೆ, ರಸ್ತೆಗಿಳಿಯಲು ಹತ್ತು ಬಾರಿ ಯೋಚಿಸುವಂತಾಗಿದೆ. ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ತೀವ್ರ ಪರದಾಡುತ್ತಿದ್ದಾರೆ. ಒಂದೆಡೆ ಮಳೆ ಜನರಿಗೆ ಸಮಸ್ಯೆಯಾದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳಿಗೂ ಭಾರೀ ನಿರಾಸೆ ಉಂಟುಮಾಡಿದೆ. ಇದಕ್ಕೆ ಕಾರಣ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಆಟಕ್ಕೆ ಇದೀಗ ವರುಣ ಅಡಚಣೆ ಉಂಟುಮಾಡಿದೆ. ಬೆಂಬಿಡದೆ ಸುರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ಕ್ರಿಕೆಟ್ ಪ್ರೇಮಿಗಳು ಬೇಸರಗೊಂಡಿದ್ದಾರೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ಸಹ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ರಾಜ್ಯದ 13 ಜಿಲ್ಲೆಗಳಿಗೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.