ಸೆ.11 ರಂದು ಬೆಂಗಳೂರಿನಲ್ಲಿ ರಸ್ತೆಗಿಳಿಯುವುದಿಲ್ಲ ಆಟೋ, ಟ್ಯಾಕ್ಸಿ, ಖಾಸಗಿ ಬಸ್​!

Untitled design - 2023-09-01T140645.155
Published on

ಬೆಂಗಳೂರು: ಸೆಪ್ಟೆಂಬರ್ 11 ರಂದು ಬೆಂಗಳೂರಿನಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ಬಸ್​ಗಳು ರಸ್ತೆಗೆ ಇಳಿಯುವುದಿಲ್ಲ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ಸಿಡಿದೆದ್ದ ಖಾಸಗಿ ವಾಹನ ಚಾಲಕರ ಸಂಘಗಳು, ನಗರದಾದ್ಯಂತ ಬೃಹತ್​ ಮುಷ್ಕರ ಹಮ್ಮಿಕೊಂಡಿದೆ.

ಸೆಪ್ಟೆಂಬರ್‌ 11 ರಂದು ಸರ್ಕಾರದ ವಿರುದ್ಧ ಬಂದ್ ಅಸ್ತ್ರಕ್ಕೆ ಮುಂದಾದ ಖಾಸಗಿ ಸಾರಿಗೆ ಸಂಘಟನೆಗಳು. ಗುರುವಾರ ನಡೆದ ಒಕ್ಕೂಟದ ಸಭೆಯಲ್ಲಿ ಮುಷ್ಕರದ ಬಗ್ಗೆ ತೀರ್ಮಾನಿಸಿದ್ದಾರೆ. 32 ಸಂಘಟನೆಗಳಿಂದ ಬಂದ್​ಗೆ ಬೆಂಬಲ ದೊರಕಿದ್ದು, ಆಟೋ‌, ಟ್ಯಾಕ್ಸಿ, ಖಾಸಗಿ ಬಸ್ ಸೇರಿದಂತೆ ಸಂಪೂರ್ಣ ಖಾಸಗಿ ಸಾರಿಗೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.

ಖಾಸಗಿ ಸಾರಿಗೆ ಮಾಲೀಕರ/ಚಾಲಕರ ಬೇಡಿಕೆ ಈಡೇರಿಕೆಗೆ ನೀಡಿದ್ದ ಗಡುವು ಆಗಸ್ಟ್ 30ಕ್ಕೆ ಮುಕ್ತಾಯಗೊಂಡಿದೆ. ಶಕ್ತಿ ಯೋಜನೆ ಜಾರಿ ಬಳಿಕ ಆಟೋ ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಜೀವನ ತತ್ತರವಾಗಿದೆ. ಇದಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದ ಖಾಸಗಿ ಸಾರಿಗೆ ಮಾಲೀಕರು ಹಾಗೂ ಚಾಲಕರು, ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಭೇಟಿ ಮಾಡಿದ್ದರು.

ಇದಾದ ಬಳಿಕವೂ ಬೇಡಿಕೆ ಈಡೇರದ ಹಿನ್ನಲೆ ಇದೀಗ ಖಾಸಗಿ ಸಾರಿಗೆ ಅಸೋಸಿಯೇಷನ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಸಭೆಯಲ್ಲಿ ಸೆಪ್ಟೆಂಬರ್ 11ರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 11.59 ರವರೆಗೆ ಮುಷ್ಕರಕ್ಕೆ ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net