

ಬೆಂಗಳೂರು: ಕೇಂದ್ರ ಸರ್ಕಾರ ಸೆ.1 ರ ನಂತರ ಮಹಾನಗರಗಳ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.
ಅದರಂತೆ, ಲಾಕ್ಡೌನ್ ನಂತರ ಸಂಚಾರ ಪುನಾರಂಭಕ್ಕೆ ನಮ್ಮ ಮೆಟ್ರೋ ಕೂಡ ಸಂಪೂರ್ಣ ಸಜ್ಜಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ, ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ರೋಗಿಗಳಿದ್ದಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಗೆ ಸಹಜವಾಗಿಯೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
ಲಾಕ್ಡೌನ್ ನಂತರದ ಅಗತ್ಯಗಳಿಗಾಗಿ ಮೆಟ್ರೋ ರೈಲಿನ ಬೋಗಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸೋಂಕು ನಿವಾರಣೆ ಹಾಗೂ ಗಾಳಿ ಕಣಗಳ ಮೂಲಕ ಹರಡುವುದನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಮಾಗಸೂಚಿಗಳನ್ನು ಪಾಲಿಸಿದಲ್ಲಿ ಮೆಟ್ರೋ ಪ್ರಯಾಣ ಅತ್ಯಂತ ಸುರಕ್ಷಿತವಾಗಿರಲಿದೆ ಎಂಬುದು ಡಿಸಿಎಂ ಅಶ್ವತ್ಥನಾರಾಯಣ ಅಭಿಪ್ರಾಯ.
ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನ (ಎಸ್ಒಪಿ) ಅಥವಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತಿದೆ. ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಒದಗಿಸಲಾಗುತ್ತದೆ. ಪ್ರವೇಶದ್ವಾರ, ಪ್ಲಾಟ್ಫಾರಂನಲ್ಲೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಹಾಕಲಾಗಿದೆ ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚವ್ಹಾಣ್ ಮಾಹಿತಿ ನೀಡಿದ್ದಾರೆ.
ಬೋಗಿಯ ಒಳಗೂ ಕೂಡ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲಾಗುತ್ತದೆ. ಪ್ರಯಾಣಿಕರ ಎಡಬಲದ ಸೀಟು ಖಾಲಿ ಬಿಡಲಾಗುತ್ತದೆ. ಜತೆಗೆ ನಿಲ್ಲುವವರಿಗೂ ಜಾಗ ಗುರುತು ಮಾಡಲಾಗಿರುತ್ತದೆ. ಆರು ಬೋಗಿಯ ರೈಲಿನಲ್ಲಿ ಸಾಮಾನ್ಯ ದಿನಗಳಲ್ಲಿ 1,800 ಜನರು ಪ್ರಯಾಣಿಸಿದರೆ, ಈಗ 300-350 ಜನರಿಗಷ್ಟೇ ಆವಕಾಶ ನೀಡಲಾಗುತ್ತದೆ ಎಂದು ಚವ್ಹಾಣ್ ತಿಳಿಸಿದ್ದಾರೆ.
ಅನುಮತಿ ನೀಡಿದ ನೀಡಿದ ಒಂದೆರಡು ದಿನಗಳಲ್ಲಿ ಮೆಟ್ರೋ ಸಂಚಾರಕ್ಕೆ ಸಜ್ಜಾಗಲಿದೆ. ಹೀಗಿದ್ದರೂ, ಆರಂಭದಲ್ಲಿ ಪ್ರಯಾಣಕ್ಕೆ ಜನರು ಹಿಂದೇಟು ಹಾಕುವ ಸಾಧ್ಯತೆಗಳಿಲ್ಲದಿಲ್ಲ ಎಂದೂ ಚವ್ಹಾಣ್ ಹೇಳುತ್ತಾರೆ.