

ಬೆಂಗಳೂರು: ಭಾರತದ ‘ಸಿಲಿಕಾನ್ ವ್ಯಾಲಿ’ ಎಂಬುದರ ಜತೆಗೆ ಬೆಂಗಳೂರು ಮುಡಿಯಲ್ಲಿರುವ ‘ಸ್ಟಾರ್ಟಪ್ ರಾಜಧಾನಿ’ ಎಂಬ ಕಿರೀಟಕ್ಕೆ ಕುತ್ತು ಎದುರಾಗಿರುವ ಅಂಶವೊಂದನ್ನು ಸೋಮವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆ ವರದಿ ಹೊರಹಾಕಿದೆ. 2019-2021ರ ಅವಧಿಯಲ್ಲಿ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ಟಾರ್ಟಪ್ಗಳ ಸಂಖ್ಯೆ ಆಧಾರದಲ್ಲಿ ದೇಶದಲ್ಲಿ ದೆಹಲಿಯೇ ಸ್ಟಾರ್ಟಪ್ ರಾಜಧಾನಿಯಾಗಿದ್ದು, ಬೆಂಗಳೂರಿನ ಸ್ಥಾನವನ್ನು ಕಸಿದುಕೊಂಡಿರುವುದಾಗಿ ಹೇಳಲಾಗಿದೆ. ಬೃಹತ್ ಐಟಿ ಕಂಪನಿಗಳು, ಸಂಶೋಧನಾ ಕೇಂದ್ರಗಳ ಜತೆಗೆ ಬೆಂಗಳೂರು ಟೆಕ್ ಸಮಿಟ್ನಂತಹ ಜನಪ್ರಿಯ ಕಾರ್ಯಕ್ರಮಗಳಿದ್ದೂ ಈ ಸ್ಥಾನ ಕೈತಪ್ಪಿದ್ದೇಗೆ ಎಂದು ರಾಜ್ಯ ಸರ್ಕಾರ ಚಿಂತೆಗೀಡಾಗಿದೆ. ಅಂಕಿ ಸಂಖ್ಯೆಗಳಾಚೆಗೆ ಗುಣಾತ್ಮಕವಾಗಿ ಇಂದಿಗೂ ದೇಶದಲ್ಲಿ ಬೆಂಗಳೂರೇ ಸ್ಟಾರ್ಟಪ್ ರಾಜಧಾನಿ ಎಂದು ಐಟಿಬಿಟಿ ಇಲಾಖೆ ಸಮರ್ಥಿಸಿಕೊಂಡಿದೆ.
ನಮ್ಮ ಸ್ಥಾನ ಬದಲಿಲ್ಲ: ನೋಂದಣಿ ಸ್ಥಳವನ್ನು ಮಾತ್ರ ಪರಿಗಣಿಸಿ ದೆಹಲಿಯನ್ನು ಸ್ಟಾರ್ಟಪ್ ರಾಜಧಾನಿ ಎಂದಿರುವುದು ಸರಿಯಾದ ದೃಷ್ಟಿಕೋನ ಅಲ್ಲ ಎಂದು ಕರ್ನಾಟಕದ ಐಟಿಬಿಟಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅನೇಕ ಸ್ಟಾರ್ಟಪ್ಗಳು ಒಂದು ರಾಜ್ಯದಲ್ಲಿ ನೋಂದಣಿಯಾಗಿ ಮತ್ತೊಂದು ರಾಜ್ಯದಲ್ಲಿ ಮುಖ್ಯಕಚೇರಿ ಹೊಂದಿವೆ. ಉದಾಹರಣೆಗೆ ಡೀಲ್ಷೇರ್ ಕಂಪನಿ ಕರ್ನಾಟಕದ ಹೊರಗೆ ನೋಂದಣಿಯಾಗಿದ್ದರೂ ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿದೆ. 2021ರಲ್ಲಿ ದೇಶದ ಸ್ಟಾರ್ಟಪ್ಗಳಲ್ಲಾದ 1,552 ಒಪ್ಪಂದಗಳಲ್ಲಿ 37.66 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ಅದರಲ್ಲಿ ಶೇ.50 ಮೊತ್ತ ಅಂದರೆ 20.25 ಸಾವಿರ ಕೋಟಿ ರೂ. ಬೆಂಗಳೂರಿನಲ್ಲೇ ಹೂಡಿಕೆಯಾಗಿದೆ. ಬೆಂಗಳೂರಿನಲ್ಲಿ 637 ಒಪ್ಪಂದಗಳಾಗಿದ್ದು, 431 ಒಪ್ಪಂದಗಳಾಗಿರುವ ದೆಹಲಿ (8,975 ಕೋಟಿ ರೂ.) ನಂತರದ ಸ್ಥಾನದಲ್ಲಿದೆ. ದೇಶದಲ್ಲಿರುವ ಶೇ.40 ಸ್ಟಾರ್ಟಪ್ ಯೂನಿಕಾರ್ನ್ಗಳು (100 ಕೋಟಿ ಡಾಲರ್ಗಿಂತ ಹೆಚ್ಚು ಮೌಲ್ಯದ) ಬೆಂಗಳೂರಿನಲ್ಲೇ ಇವೆ. ಆರ್ಥಿಕ ಸಮೀಕ್ಷೆಯಲ್ಲಿ ಈ ರೀತಿ ಆಳಕ್ಕಿಳಿದು ವಿಶ್ಲೇಷಣೆ ಮಾಡಬೇಕಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಟಾರ್ಟಪ್ಗಳಲ್ಲಿ ಹೂಡಿಕೆ, ನಡೆಯುತ್ತಿರುವ ಸಂಶೋಧನೆಗಳು, ಸ್ಟಾರ್ಟಪ್ಗೆ ಪೂರಕ ವಾತಾವರಣದ ದೃಷ್ಟಿಕೋನದಲ್ಲಿ ಬೆಂಗಳೂರು ಇಂದಿಗೂ ಮೊದಲ ಸ್ಥಾನದಲ್ಲೇ ಇದೆ. ಈ ಸ್ಥಾನಕ್ಕೆ ಕುತ್ತು ಬರಲು ಸರ್ಕಾರ ಅವಕಾಶ ನೀಡುವುದಿಲ್ಲ. | ಡಾ. ಸಿ.ಎನ್. ಅಶ್ವತ್ಥನಾರಾಯಣ ಐಟಿಬಿಟಿ ಸಚಿವ
ವರದಿಯಲ್ಲೇನಿದೆ?: ಕಳೆದ ಆರು ವರ್ಷದಲ್ಲಿ ಸ್ಟಾರ್ಟಪ್ಗಳ ಸಂಖ್ಯೆ ತೀವ್ರ ಹೆಚ್ಚಳವಾಗಿದೆ. 2016-17ರಲ್ಲಿ ಸರ್ಕಾರ ಕೇವಲ 733 ಸ್ಟಾರ್ಟಪ್ ಗುರುತಿಸಿದ್ದರೆ ಇದೀಗ 2021ರಲ್ಲಿ 14,000 ಇದೆ. ಒಟ್ಟಾರೆಯಾಗಿ ದೇಶದಲ್ಲೀಗ 61,400 ಸ್ಟಾರ್ಟಪ್ ಗುರುತಿಸಲಾಗಿದೆ. ಬೆಂಗಳೂರು ಹೊಂದಿದ್ದ ಭಾರತದ ಸ್ಟಾರ್ಟಪ್ ರಾಜಧಾನಿ ಸ್ಥಾನವನ್ನು ಕೆಲ ವರ್ಷಗಳಿಂದ ದೆಹಲಿ ಕಸಿದುಕೊಂಡಿದೆ. 2019-21ರ ಅವಧಿಯಲ್ಲಿ ಬೆಂಗಳೂರಿನಲ್ಲಿ 4,514 ಸ್ಟಾರ್ಟಪ್ ನೋಂದಣಿಯಾಗಿದ್ದರೆ ಇದೇ ಅವಧಿಯಲ್ಲಿ ದೆಹಲಿಯಲ್ಲಿ 5 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿವೆ. ರಾಜ್ಯಗಳ ಲೆಕ್ಕದಲ್ಲಿ, ಒಟ್ಟಾರೆ 11,308 ಸ್ಟಾರ್ಟಪ್ ನೋಂದಣಿಯೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.