

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕರಾವಳಿ ನೆಲದ ಕಂಬಳ ಕೋಣಗಳ ಓಟ ಕಣ್ತುಂಬಿಕೊಳ್ಳಲು ಜನಸಾಗರ ಹರಿದುಬಂದಿತ್ತು. ಅಲೇ ಬುಡಿಯೆರ್.... ಏ, ತೂಲಯ ಅಲ್ಪ ಗೋಣೆರ್ ಬಲಿಪ್ಪುನೆ... ಏರ್ ವಿನ್ ಆಯೆರ್ಗೆ? ಆಯೆನ್ ಸಿಕ್ಸ್ ಪ್ಯಾಕ್ ತೂಲಯಾ... ಬಲೆ ಮರ್ರೆ, ಒಂಜಿ ಸೆಲ್ಫಿ ದೆಪ್ಪುಗ...ಫುಡ್ ಕೋರ್ಟ್ ಪೋಯಿ, ಬೆಚ್ಚ ಬೆಚ್ಚ ಚಾ ಪರ್ಕ... ಗೋಳಿ ಬಜೆ ತಿನ್ಕ...ಅರಮನೆ ಮೈದಾನದಲ್ಲಿ ಭೇಟಿ ಕೊಟ್ಟರೆ ಕಿವಿಗೆ ಕೇಳಿಸುವ ಮಾತುಗಳಿವು....
ಕರಾವಳಿಯ ತಿಂಡಿ&ತಿನಿಸುಗಳನ್ನು ಸವಿಯಲು ಕಂಬಳಕ್ಕೆ ಬಂದಿದ್ದ ಮಂದಿ ಮುಗಿಬಿದ್ದರು. ಮಂಗಳೂರು ಬನ್ಸ್, ಬಜ್ಜಿ, ತುಪ್ಪ ದೋಸೆ, ಗೋಳಿ ಬಜೆ, ಪುಂಡಿ ಗಸಿ, ಕೋರಿ ರೊಟ್ಟಿ, ಮೀನಿನ ವಿವಿಧ ಖಾದ್ಯಗಳನ್ನು ಸವಿದರು. ಹೀಗಾಗಿ ಬೆಳಗ್ಗಿನಿಂದಲೇ ುಡ್ಕೋರ್ಟ್ನಲ್ಲಿ ಹೆಚ್ಚಿನ ಜನರಿದ್ದರು. ಸಂಜೆಯಾಗುತ್ತಿದ್ದಂತೆ ದಟ್ಟಣೆ ಹೆಚ್ಚಾಗುತ್ತಾ ಹೋಯಿತು.
ಕಂಬಳ ಮೈದಾನದ ಒಳಭಾಗಕ್ಕೆ ಆಗಮಿಸುತ್ತಿದ್ದಂತೆ ಕರಾವಳಿ ಭಾಗದ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟಂತಹ ಅನುಭವವಾಗುತ್ತದೆ. ಸಿನಿಮಾ, ಸಾಮಾಜಿಕ ಜಾಲತಾಣದ ಮೂಲಕ ಕಂಬಳವನ್ನು ಕಂಡಿದ್ದ ಮಂದಿ, ಇದೇ ಮೊದಲ ಬಾರಿಗೆ ನೇರವಾಗಿ ಕೋಣಗಳ ಓಟವನ್ನು ಕಣ್ತುಂಬಿಕೊಂಡರು. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಜನರು ಆಶ್ಚರ್ಯ ಪಟ್ಟಿದ್ದರು. ರಾಜಧಾನಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಮಂದಿಯಲ್ಲಿ, ಅರ್ರೆ, ನಮ್ಮೂರಿನಲ್ಲಿ ನಡೆಯುವ ಜಾನಪದ ಕ್ರೀಡೆ, ಇಲ್ಲಿ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಬೆಂಗಳೂರು ಕಂಬಳಕ್ಕೆ ಮೊದಲ ದಿನ ಬೆಳಗ್ಗಿನಿಂದಲೇ ಸಾಲು ಸಾಲಾಗಿ ಜನರು ಬಂದಿದ್ದಾರೆ. ಅರಮನೆ ಮೈದಾನದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.