ಬಿಜೆಪಿ ಮೇಲಿನ ನಂಬಿಕೆ ಹುಸಿಯಾಗಿದೆ ಎನ್ನುತ್ತಲೇ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಘೋಷಿಸಿದ ಜನಾರ್ದನ ರೆಡ್ಡಿ

Janardhana Reddy
Published on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ರಾಜಕೀಯ ನಡೆ ಕೊನೆಗೂ ಬಹಿರಂಗವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಹೊ ಪಕ್ಷ ಘೋಷಣೆ ಮಾಡುವ ಮೂಲಕ ಹೊಸದಾಗಿ ರಾಜಕೀಯ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಇಷ್ಟು ದಿನದಗಳವರೆಗೆ ಬಿಜೆಪಿ ಸದಸ್ಯನೆಂದು ಹೇಳಿಕೊಳ್ಳುತ್ತಿದ್ದೆ. ಪಕ್ಷದ ನಾಯಕರು ನನ್ನನ್ನು ನಿರ್ಲಕ್ಷ್ಯ ಮಾಡಿದರೂ ನಾನು ಬಿಜೆಪಿಯವನು ಎಂದು ಹೇಳುತ್ತಾ ಬಂದೆ. ಆದರೆ, ಬಿಜೆಪಿ ಮೇಲಿನ ನಂಬಿಕೆ ಹುಸಿಯಾಗಿದ್ದು, ಇಂದಿನಿಂದ ಕಲ್ಯಾಣ ರಾಜ್ಯ ಪ್ರಗತಿ ಹೆಸರಿನ ಹೊಸ ಪಕ್ಷದ ಮೂಲಕ ರಾಜಕೀಯ ಪ್ರಯಣವನ್ನು ಮತ್ತೆ ಆರಂಭಿಸುತ್ತಿದ್ದೇನೆ. ಬಸವಣ್ಣನವರ ಸರ್ವಧರ್ಮ ಸಮಾನತೆ ಆಶಯದೊಂದಿಗೆ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಜನಾರ್ದನ ರೆಡ್ಡಿ ಅವರು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಜನಾರ್ದನ ರೆಡ್ಡಿ ಹೇಳಿದರು. ಮುಂದಿನ 10 ರಿಂದ 15 ದಿನದಲ್ಲಿ ಪಕ್ಷದ ಚಿನ್ಹೆ, ಅಭ್ಯರ್ಥಿಗಳ ಹೆಸರು ಹಾಗೂ ಪ್ರನಾಳಿಕೆಯನ್ನು ಘೋಷಣೆ ಮಾಡುತ್ತೇನೆ. ನನ್ನ ಈ ಪ್ರಯತ್ನಕ್ಕೆ ಜನರ ಸಹಕಾರ ಇರಲಿದೆ. ರಾಜ್ಯವನ್ನು ಕಲ್ಯಾಣ ಕರ್ನಾಟಕ ಮಾಡೋದೇ ನನ್ನ ಉದ್ದೇಶ ಎಂದು ರೆಡ್ಡಿ ತಿಳಿಸಿದರು.

ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ಪ್ರಮುಖಾಂಶಗಳು

ನಗರದ ಪಾರಿಜಾತ ಅಪಾರ್ಟ್​ಮೆಂಟ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ ಅವರು ಅಜಾತಶತ್ರು ಅಟಲ್ ಜನ್ಮ ದಿನದ ಶುಭಾಶಯ ತಿಳಿಸಿ, ತಮ್ಮ ಮಾತನ್ನು ಆರಂಭಿಸಿದರು. ಬಸವಣ್ಣನವರ ವಚನ ಕಾಯಕವೇ ಕೈಲಾಸವನ್ನು ನಾನು 18ನೇ ವಯಸ್ಸಿನಿಂದ ಪಾಲಿಸುತ್ತಾ ಬಂದಿದ್ದೇನೆ. ನಾನು ಬಸವಣ್ಣನವರ ವಚನದಂತೆ ಸತ್ಯಪಾಲಿಸುವವನು. ಮೈನಿಂಗ್​ನಲ್ಲಿ ಭಗವಂತ ಊಹಿಸಿದ್ದಕ್ಕಿಂತ ಹೆಚ್ಚು ಕೊಟ್ಟಿದ್ದಾನೆ. 16 ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚು ಉದ್ಯೋಗ ಕೊಟ್ಟ ತೃಪ್ತಿ ಇದೆ ಎಂದರು.

ಶ್ರೀರಾಮುಲು ನಾನು ಚಿಕ್ಕವಯಸ್ಸಿನಿಂದಲೂ ಮುಖಪರಿಚಯ. ನಾನು ಇನೋಬಲ್ ಸಂಸ್ಥೆ ಮಾಡಿದ್ದೆ, ಆಗ ಶ್ರೀರಾಮುಲು ಮಾವ ಸಾರ್ವಜನಿಕ ಸೇವೆಯಲ್ಲಿ ಇದ್ದರು. ಶ್ರೀರಾಮುಲು ಸೋದರಮಾವನನ್ನು ಬಳ್ಳರಿಯಲ್ಲಿ ಭೀಕರವಾಗಿ ಕೊಲೆ ಮಾಡಿದ್ರು. ಈ ಘಟನೆಯ ಬಳಿಕ ರಾಮುಲು ನನ್ನ ಆಶ್ರಯಕ್ಕೆ ಬಂದ್ದರು. ನಗರಸಭಾ ಸದಸ್ಯರಾಗಿ ಬೆಳೆದರು. ಆನಂತರ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿ ಶಾಸಕರಾಗಲು ಬಯಸಿದರು. 1999ರಲ್ಲಿ ನಾವೆಲ್ಲಾ ನಾಮಿನೇಷನ್ ಹಾಕಲು ಹೋಗಿದ್ವಿ. ಆಗಲೇ ಸೋನಿಯಾ ಗಾಂಧಿ ಬಳ್ಳಾರಿಗೆ ಬರುವ ಸುದ್ದಿ ಇದೆ ಅಂತ ಒತ್ತಡದಲ್ಲಿ ರಾಮುಲು ಕರೆ ಮಾಡಿದ್ರು. ನಾನು ಭಗವಂತ ಇದ್ದಾನೆ ಎಂದು ಹೇಳಿದ್ದೆ. ಮುಂದಿಟ್ಟ ಹೆಜ್ಜೆ ಹಿಂತೆಗೆಯೋದು ಬೇಡ ಎಂದಿದ್ದೆ.

ನಂತರದಲ್ಲಿ ಸುಷ್ಮಾ ಸ್ವರಾಜ್ ಬರೋ ಸುದ್ದಿ ಬಂತು. ಸೋನಿಯಾ ಗಾಂಧಿ ಬರುವ ವಿಚಾರ ಬಹಳ ರಹಸ್ಯವಾಗಿತ್ತು. ಸುಷ್ಮಾ ಸ್ವರಾಜ್ ನಾಮಿನೇಷನ್ ಬಳಿಕ ದೊಡ್ಡ ದೊಡ್ಡ ನಾಯಕರೆಲ್ಲ ನನ್ನ ಆಫೀಸ್​ಗೆ ಬಂದರು. ಆಫೀಸ್ ಬಿಟ್ಟು ಚುನಾವಣೆಗೆ ಪಕ್ಷದ ಕೆಲಸ ಮಾಡಲು ಹೇಳಿದರು. ನನಗೆ ತಾಯಿಯಂತೆ ಕಂಡರು. ನಾನು ಮರುಮಾತಾಡದೇ ಅವರ ಜೊತೆ ನಿಂತೆ. ಆಗ 500 ಸಭೆ ಆಯೋಜನೆ ಮಾಡಿ ಮನೆಮನೆಗೆ ಬಿಜೆಪಿ ತಲುಪಿಸೋ ಕೆಲಸ ಮಾಡಿದೆ. ಯಾರನ್ನ ನೀನು ಎದುರು ಹಾಕಿಕೊಂಡಿದ್ದೀಯಾ ಅಂತಾ ಆಗ ಎಲ್ಲರೂ ಹೆದರಿಸಿದರು. ಕಾಂಗ್ರೆಸ್​ನವರನ್ನು ಎದರು ಹಾಕಿಕೊಳ್ಬೇಡ ಅಂದಿದ್ದರು. ಆದ್ರೆ ನಾನು ಯಾವತ್ತೂ ಹೆದರಿಲ್ಲ. ಆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ 50 ಸಾವಿರ ಅಂತರದಿಂದ ಸೋತರು. ರಾಮುಲು ಕೂಡಾ ಅಲ್ಪಮತದಿಂದ ಸೋತರು. ಆ ರಾತ್ರಿ ನಮ್ಮ ತಾಯಿ ಕೂಡಾ ಕಣ್ಣೀರಿಟ್ರು. ಆದರೆ, ಸುಷ್ಮಾ ಸ್ವರಾಜ್ ನಮಗೆ ಧೈರ್ಯ ತುಂಬಿದರು. ಆಗ ಸುಷ್ಮಾ ಸ್ವರಾಜ್ ಪ್ರತೀ ವರ್ಷ ಮನೆಗೆ ಬರೋದಾಗಿ ಹೇಳಿದರು. ಹಾಗೇ ಅವರು ಬರುವ ದಿನ ಸಾಮೂಹಿಕ ಮದುವೆ, ವರಮಹಾಲಕ್ಷ್ಮೀ ಹಬ್ಬ ಆಯೋಸಿದ್ದನ್ನು ನೀವೆಲ್ಲಾ ನೋಡಿದ್ದೀರಿ ಎಂದರು.

2001ರಲ್ಲಿ ಮೊದಲ ಬಾರಿಗೆ ಬಳ್ಳಾರಿ ನಗರಸಭೆಯಲ್ಲಿ ಬಿಜೆಪಿ ಗೆದ್ದಿತು. ಇದರಲ್ಲಿ 7 ಮಂದಿ ಮುಸಲ್ಮಾನರಿದ್ದರು. ನಂತ್ರ 2004 ರಲ್ಲಿ ಕರುಣಾಕರ ರೆಡ್ಡಿ ಪಾರ್ಲಿಮೆಂಟ್​ಗೆ ನಿಂತರು. ಆ ಸಂದರ್ಭದಲ್ಲಿ ರಾಮುಲು, ಕರುಣಾಕರ ರೆಡ್ಡಿ ಗೆದ್ದರು. ನಾನು ಆಫೀಸ್ ಬಿಟ್ಟು ರಾಜಕೀಯಕ್ಕೆ ಇಳಿದು ಕೆಲಸ ಮಾಡಲು ಶುರುಮಾಡಿದೆ. ಅಂದಿನಿಂದ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಯಡಿಯೂರಪ್ಪ-ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಮಾಡಲು ಮುಂದಾದರು. ಇದಕ್ಕೆ ಕೈ ಜೋಡಿಸಲು ಬಿಎಸ್​ವೈ ಹೇಳಿದರು. ಆಗ ಮಂತ್ರಿಯಾಗಲು ನನ್ನನ್ನು ಬಿಎಸ್​ವೈ ಕೇಳಿದರು. ಆದರೆ, ನಾನು ಸವಿನಯದಿಂದ ತಿರಸ್ಕರಿಸಿದೆ. ರಾಮುಲು ಬೇರೆಯಲ್ಲ ನಾನು ಬೇರೆಯಲ್ಲ ಅವರನ್ನೇ ಮಂತ್ರಿಮಾಡಲು ಹೇಳಿದೆ. ಆಗ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ನಾನು ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡಿದೆ. ಸಮ್ಮಿಶ್ರ ಸರ್ಕಾರದ ನಿಯಮ ಪಾಲನೆ ಮಾಡಿಲ್ಲ ಅಂತ ನನ್ನನ್ನು ಪಕ್ಷ ಅಮಾನತು ಮಾಡಿತು. ನನ್ನನ್ನು ಬಿಜೆಪಿ ಅಮಾನತು ಮಾಡಿತ್ತು. ಆಗ ಜೆಡಿಯುನಲ್ಲಿ ಬಸವರಾಜ ಬೊಮ್ಮಾಯಿ ಇದ್ರು. ಅವರು ಜೆಡಿಯುಗೆ ನನ್ನನ್ನ ಕರೆದಿದ್ರು. ‌ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದೆ. ನಾನು ರಾಜಕೀಯ ಬಿಡಬಹುದೇ ಹೊರತು ಬೇರೆಪಕ್ಷ ಸೇರೋದಿಲ್ಲ ಎಂದಿದ್ದೆ. ಸುಷ್ಮಾ ಸ್ವರಾಜ್ ಅವರನ್ನು ಬಿಟ್ಟು ಬರೋದಿಲ್ಲ ಅಂದಿದ್ದೆ ಎಂದು ಹಳೆಯ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡ್ಬೇಕು. ಅವರನ್ನ ಒಮ್ಮೆ ಮುಖ್ಯಮಂತ್ರಿ ಆಗ್ಬೇಕು ಅಂತ ಕೆಲಸ ಮಾಡಿದೆ. ಚುನಾವಣೆಯಲ್ಲಿ ನನ್ನ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಕ್ಷೇತ್ರ ಗೆದ್ದಿದ್ರು. ಆ ಚುಮಾವಣೆಯಲ್ಲಿ 110 ಜನ ಮಾತ್ರ ಗೆದ್ದಿದ್ರು. ಆಗ ನಾನು ನಾಲ್ಕು ಮಂದಿ ಪಕ್ಷೇತರ ಸದಸ್ಯರನ್ನ ಕರೆದುಕೊಂಡು ಶಾಸಕಾಂಗ ಪಕ್ಷಕ್ಕೆ ಹೋದೆ. ಆಗ ರಾತ್ರಿ 2 ಗಂಟೆಗೆ ನನ್ನ ಕರೆದು ನಾಳೆ ಪ್ರಮಾಣವಚನ ಸ್ವೀಕರಿಸೋಕೆ ಹೇಳಿದ್ರು. ನಾನು ಬೇಡ, ಒಂದೇ ಮನೆಯಲ್ಲಿ ಮೂವರು ಮಂತ್ರಿ ಬೇಡ ಅಂದ್ರೂ ಯಡಿಯೂರಪ್ಪ ಕೇಳಲಿಲ್ಲ. ಅವರಲ್ಲಿ ಕೃತಜ್ಞತಾ ಭಾವನೆ ಎದ್ದು ಕಾಣ್ತಿತ್ತು. ನಂತರ ನಾನು ಸಚಿವನಾಗಿ, ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಏನು ಅಭಿವೃದ್ಧಿ ಮಾಡಿದೆ ಅನ್ನೋದು ಗೊತ್ತಿರೋ ವಿಚಾರ. ಇದು ಯಡಿಯೂರಪ್ಪ ಹಾಗೂ ಜನರ ಆಶೀರ್ವಾದ ಇಲ್ಲದೇ ಮಾಡಲು ಸಾಧ್ಯವಾಗ್ತಿರಲಿಲ್ಲ ಎಂದರು.

ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ಅಂತಾ ಅಪಪ್ರಚಾರ ಮಾಡಿದರು. ಆಗ ಆಕ್ರಮಣಕಾರಿಯಾಗಿ ನನ್ನನ್ನು ಬಂಧನ ಮಾಡಿದರು. ನಾನು ಅಕ್ರಮ ಮಾಡಿರಲಿಲ್ಲ ಸಕ್ರಮ ಗಣಿಗಾರಿಕೆ ಆಗಿತ್ತು. 1999ರಲ್ಲಿ ಸುಷ್ಮಾಸ್ವರಾಜ್ ಪರ ಕೆಲಸ ಮಾಡಿದ್ರ ಫಲವಾಗಿ 2011ರಲ್ಲಿ ಆಕ್ರಮಣಕಾರಿ ಬಂಧನ ಆಯ್ತು. ಆಗ ಬಿಎಸ್​ವೈ, ಜಗದೀಶ್ ಶೆಟ್ರು ಮಾತ್ರ ನನ್ನ ಕುಟುಂಬವನ್ನು ಸಂತೈಸಿದ್ರು. ಬೇರಾರು ಬರಲಿಲ್ಲ. ಆಗ ನಮ್ಮವರು ಯಾರು ಅಂತ ಗೊತ್ತಾಯ್ತು. ಈ ವಿಚಾರವಾಗಿ ನಾನು ಹೆಚ್ಚಾಗಿ ಹೇಳೋಕೆ ಹೋಗೋದಿಲ್ಲ ಎಂದು ಹಳೆಯ ಘಟನೆಗಳನ್ನು ರೆಡ್ಡಿ ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net