ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಕ್ರಮ

City 12 Bangalore University
Published on

ದೇವರಾಜ್ ಎಲ್.

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ವಿಶ್ವವಿದ್ಯಾಲಯಗಳ ಕುಲಾಧಿಪತಿ ರಾಜ್ಯಪಾಲರು ನೋಟಿಸ್ ನೀಡಿದ್ದರೂ ವಿವಿ ಕ್ಯಾರೆ ಎಂದಿಲ್ಲ. ಈ ಎಲ್ಲ ಬೆಳವಣಿಗೆಗಳು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳನ್ನು ಮುಚ್ಚಿಡಲು ನಡೆಸುತ್ತಿರುವ ಪ್ರಯತ್ನಗಳಾಗಿವೆ. ಈ ಬಗ್ಗೆ ಸಿಂಡಿಕೇಟ್ ಸದಸ್ಯರು ಮಾಹಿತಿ ಕೇಳಿದರೂ ವಿವಿಯು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬೆಂ.ಕೇಂದ್ರ ವಿವಿಯಲ್ಲಿ ಪರೀಕ್ಷಾ ತಂತ್ರಜ್ಞಾನ ಕಾರ್ಯಕ್ರಮಗಳಿಗೆ ಟೆಂಡರ್ ಕರೆಯದೆ ಕೆಪಿಟಿಟಿ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ. ವಿವಿಯ ಆರಂಭವಾದ ದಿನದಿಂದ ಈವರೆಗೆ ವಾರ್ಷಿಕ ವರದಿಯನ್ನೇ ರೂಪಿಸಿಲ್ಲ. ಸಂಯೋಜಿತ ಕಾಲೇಜುಗಳಿಂದ ಚಂದಾ ವಸೂಲಿ ಮಾಡಿ 2 ಕೋಟಿ ರೂ. ವೆಚ್ಚ ಮಾಡಿ ವಿಜ್ಞಾನ ಸಮಾವೇಶಕ್ಕೆ ನಡೆಸಲಾಗಿತ್ತು. ಇದರ ಲೆಕ್ಕಗಳನ್ನು ಕೊಟ್ಟಿಲ್ಲ. ಈ ಎಲ್ಲ ಅಕ್ರಮಗಳನ್ನು ವಿವಿ ಅಧಿಕಾರಿಗಳು ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

6 ತಿಂಗಳ ನಂತರ ಸಭೆ: ಬೆಂ.ಕೇಂದ್ರ ವಿವಿ 43ನೇ ಭಾರತೀಯ ಸಮಾಜ ವಿಜ್ಞಾನ ಸಮಾವೇಶವನ್ನು ನಡೆಸಿದ್ದು ಕಳೆದ ಜ.17ರಂದು. ಹಾಗೇ ಪರೀಕ್ಷಾ ಕಾರ್ಯಕ್ರಮಗಳನ್ನು ಆನ್​ಲೈನ್ ಗೊಳಿಸುವ ಪ್ರಕ್ರಿಯೆಗೆ ಅಗತ್ಯ ತಂತ್ರಜ್ಞಾನಗಳನ್ನು ಖರೀದಿಸಲು ಮುಂದಾಗಿದ್ದು ಇದೇ ಅವಧಿಯಲ್ಲಿ. ಈ ವಿಚಾರಗಳನ್ನು ರ್ಚಚಿಸಲು ವಿಶೇಷ ಸಿಂಡಿಕೇಟ್ ಸಭೆ ಕರೆಯುವಂತೆ ಸದಸ್ಯರು ಒತ್ತಾಯಿಸಿದ್ದರು.

ಇಂತಹ ಗಂಭೀರ ವಿಚಾರಗಳನ್ನು ರ್ಚಚಿಸಲು ವಿವಿಯು ಸಭೆ ಕರೆದಿದ್ದು, ಅಕ್ರಮ ನಡೆದ ಆರು ತಿಂಗಳ ನಂತರ. ಈ ವೇಳೆ ಅಕ್ರಮಗಳ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ನನ್ನ ಬಳಿ ಅಗತ್ಯ ದಾಖಲೆಗಳಿಲ್ಲ. ಕ್ರೋಡೀಕರಣಕ್ಕೆ ಸಮಯ ಬೇಕಿದೆ ಎಂದು ಕುಲಪತಿಗಳು ಬೇಜವಾಬ್ದಾರಿ ಉತ್ತರವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸದಸ್ಯರೆಲ್ಲರೂ ಸೇರಿ ಏಳು ಪುಟಗಳ ದೂರನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

ಕಾಲಾವಧಿ ನಿಗದಿ ಮಾಡಿಲ್ಲ: ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಿಂದ ಮಾಹಿತಿ ಕೇಳುವಾಗ ಏಳು ದಿನ ಇಲ್ಲವೇ 21 ದಿನದೊಳಗೆ ಮಾಹಿತಿ ನೀಡಬೇಕೆಂದು ರಾಜ್ಯಪಾಲರು ತಮ್ಮ ನೋಟಿಸ್​ನಲ್ಲಿ ಕಾಲಾವಧಿ ನಿಗದಿ ಮಾಡಿ ವಿವಿಗೆ ಪ್ರತ ಕಳುಹಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸಾಧ್ಯವಾದಷ್ಟು ಬೇಗ ಎಂದು ಹೇಳಲಾಗಿದೆ ಹೊರತು ಎಲ್ಲಿಯೂ ಕಾಲಾವಧಿ ಸೂಚಿಸಿಲ್ಲ. ಇದರಿಂದಾಗಿ ರಾಜ್ಯಪಾಲರ ಕಚೇರಿಯ ಅಧಿಕಾರಿಗಳೂ ವಿಶ್ವವಿದ್ಯಾಲಯದ ಪರವಾಗಿಯೇ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟಲು ಕಾರಣವಾಗಿದೆ.

ಸಿಂಡಿಕೇಟ್ ಸದಸ್ಯರ ದೂರಿನಲ್ಲೇನಿದೆ?: ವಿಶ್ವವಿದ್ಯಾಲಯಗಳು ಪ್ರತಿ ವರ್ಷ ವಾರ್ಷಿಕ ವರದಿಯನ್ನು ರೂಪಿಸಿ ಇದನ್ನು ಸಿಂಡಿಕೇಟ್ ಸಭೆ ಮುಂದೆ ಪ್ರಸ್ತಾಪಿಸಿ ಅನುಮೋದನೆ ಪಡೆದು ಸೆಪ್ಟಂಬರ್ ಅವಧಿಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ, ವಿವಿಯ ಯಾವುದೇ ವರದಿಯನ್ನು ಸಲ್ಲಿಸಿಲ್ಲ. ಸಿವಿಲ್ ಕಾಮಗಾರಿ ಮತ್ತಿತರ ಖರೀದಿ ವಿಚಾರಗಳಲ್ಲಿ ಸಮಿತಿ ರಚನೆ ಮಾಡಿಲ್ಲ. ಸಿಂಡಿಕೇಟ್ ಸಭೆ ಮುಂದೆ ಪ್ರಸ್ತಾಪಿಸಿಲ್ಲ. ವಿಜ್ಞಾನ ಸಮಾವೇಶಕ್ಕೆ 2 ಕೋಟಿ ರೂ. ವೆಚ್ಚ ಮಾಡಿದ್ದು, ಇದರ ಲೆಕ್ಕವೇ ವಿವಿ ಬಳಿ ಇಲ್ಲ. ಆರ್ಥಿಕ ಅರಾಜಕತೆ ವಿವಿಯಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗಿ ತಿಳಿದಿದೆ. ಇದರಲ್ಲಿ ವಿವಿಯ ಕುಲಪತಿ ಮತ್ತು ಅಧಿಕಾರಿ ವರ್ಗ ಶಾಮೀಲಾಗಿರುವುದು ಕಂಡು ಬಂದಿದೆ ಎಂದು ಸಿಂಡಿಕೇಟ್ ಸದಸ್ಯರು ನೇರವಾಗಿ ಆರೋಪಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net