ರಗ್ಬಿ ಪ್ರೀಮಿಯರ್ ಲೀಗ್: ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬ್ರೇವ್‌ಹಾರ್ಟ್ಸ್

ರಗ್ಬಿ ಪ್ರೀಮಿಯರ್ ಲೀಗ್: ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬ್ರೇವ್‌ಹಾರ್ಟ್ಸ್
ರಗ್ಬಿ ಪ್ರೀಮಿಯರ್ ಲೀಗ್: ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬ್ರೇವ್‌ಹಾರ್ಟ್ಸ್
Published on
ಹೈದರಾಬಾದ್: ರಗ್ಬಿ ಪ್ರೀಮಿಯರ್ ಲೀಗ್ (Rugby Premier League) ಸೀಸನ್ 2ರ ಮೂರನೇ ದಿನವಾದ ಗುರುವಾರ, ಗಚಿಬೌಲಿ‌ನ ಗಂತಿ ಮೋಹನ ಚಂದ್ರ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡವು ದೆಹಲಿ ರೆಡ್ಜ್ ತಂಡವನ್ನು 38-28 ಅಂತರದಿಂದ ಮಣಿಸಿತು. ಮಹಿಳಾ ವಿಭಾಗದಲ್ಲಿ ಚೆನ್ನೈ ಬುಲ್ಸ್ ಮತ್ತು ಮುಂಬೈ ಡ್ರೀಮರ್ಸ್ ತಂಡಗಳ ನಡುವಿನ ಪಂದ್ಯ 26-26 ಅಂಕಗಳ ಸಮಬಲದಲ್ಲಿ ಅಂತ್ಯಗೊಂಡಿತು.
ಅಕ್ವಿಲಾ ರೊಕೊಲಿಸೋವಾ ಅವರ ಟ್ರೈ ಮೂಲಕ ಬೆಂಗಳೂರು ಬ್ರೇವ್‌ಹಾರ್ಟ್ಸ್ ಉತ್ತಮ ಆರಂಭ ಕಂಡಿತು. ಆದರೆ ಪ್ಯಾಟ್ರಿಕ್ ಒಡೊಂಗೊ ಅವರ ಇಂಟರ್‌ಸೆಪ್ಷನ್ ಟ್ರೈ ದೆಹಲಿ ರೆಡ್ಜ್‌ಗೆ ತಕ್ಷಣವೇ ಸಮಬಲ ತಂದುಕೊಟ್ಟಿತು. ಬಳಿಕ ಶಿಲ್ಟನ್ ವಾನ್ ವೈಕ್ ಸತತ ಎರಡು ಟ್ರೈಗಳನ್ನು ಗಳಿಸಿ ಬೆಂಗಳೂರಿಗೆ ಮತ್ತೆ ಮುನ್ನಡೆ ನೀಡಿದರು. ಆದರೆ ಲೂಸಿಯಾನೊ ಗೊನ್ಜಾಲೆಜ್ ಮತ್ತು ಒಡೊಂಗೊ ಅವರ ಟ್ರೈಗಳಿಂದ ದೆಹಲಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದ ಆರಂಭದಲ್ಲೇ ವಾನ್ ವೈಕ್ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರೆ, ಗೊನ್ಜಾಲೆಜ್ ಮತ್ತೊಂದು ಅದ್ಭುತ ವೈಯಕ್ತಿಕ ಟ್ರೈ ಮೂಲಕ ಪ್ರತಿಕ್ರಿಯಿಸಿದರು. ನಗರೋಹಿ ಮೆಕ್‌ಗಾರ್ವಿ ಬ್ರೇವ್‌ಹಾರ್ಟ್ಸ್ ತಂಡವನ್ನು ಮುನ್ನಡೆದಲ್ಲೇ ಉಳಿಸಿದರು. ಅಂತಿಮ ಕ್ವಾರ್ಟರ್‌ನಲ್ಲಿ ರಿಯಾನ್ ಆಪ್ಸ್ ದೂರದ ಓಟದ ಟ್ರೈ ಮೂಲಕ ಬೆಂಗಳೂರಿನ ಗೆಲುವನ್ನು ಖಚಿತಪಡಿಸಿದರು.
ಚೆನ್ನೈ ಬುಲ್ಸ್ ಹಾಗೂ ಮುಂಬೈ ಡ್ರೀಮರ್ಸ್ ಪಂದ್ಯ 26-26 ಅಂಕಗಳಲ್ಲಿ ಡ್ರಾ: ಲಕ್ಷ್ಮಿ ಒರಾಂವ್ ಮುಂಬೈ ಡ್ರೀಮರ್ಸ್‌ಗೆ ಪರಿಪೂರ್ಣ ಆರಂಭ ನೀಡಿದರು. ಆದರೆ ಸವಾನಾ ಬೌಡರ್ ಟ್ರೈ ಮತ್ತು ಕನ್ವರ್ಷನ್ ಮೂಲಕ ಚೆನ್ನೈ ಬುಲ್ಸ್ ತಂಡವನ್ನು ಮುನ್ನಡೆಗೆ ತಂದರು. ಎರಡನೇ ಕ್ವಾರ್ಟರ್‌ನಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಚೆನ್ನೈ ಪರ ಅಮನ್‌ದೀಪ್ ಕೌರ್ ಮತ್ತೊಂದು ಟ್ರೈ ದಾಖಲಿಸಿ ಅಂತರವನ್ನು ಹೆಚ್ಚಿಸಿದರು.
ವಿರಾಮದ ಬಳಿಕ ಮಮಾ ನಾಯಕ್ ಮತ್ತು ಗ್ರೇಸ್ ಒಕುಲು ಟ್ರೈಗಳ ನೆರವಿನಿಂದ ಮುಂಬೈ ಡ್ರೀಮರ್ಸ್ ಭರ್ಜರಿ ಹೋರಾಟ ತೋರಿತು. ಆದರೆ ಸಂಧ್ಯಾರಾಣಿ ಟುಡು ಚೆನ್ನೈ ತಂಡವನ್ನು ಸಮಬಲದಲ್ಲೇ ಉಳಿಸಿದರು. ಕೊನೆಯ ಹಂತದಲ್ಲಿ ಭೂಮಿಕಾ ಶುಕ್ಲಾ ಅವರ ಟ್ರೈ ಮುಂಬೈಗೆ ಗೆಲುವು ತಂದುಕೊಡಲಿದೆ ಎನ್ನುವಂತಾಗಿತ್ತು. ಆದರೆ ಪಂದ್ಯ ಮುಗಿಯುವ ಕ್ಷಣಗಳಲ್ಲಿ ಬೌಡರ್ ಮತ್ತೊಮ್ಮೆ ಟ್ರೈ ದಾಖಲಿಸಿ ಪಂದ್ಯವನ್ನು ರೋಚಕ ಡ್ರಾಗೆ ಕೊಂಡೊಯ್ದರು.
ಶುಕ್ರವಾರದ ಪಂದ್ಯಗಳಲ್ಲಿ ಮಹಿಳಾ ವಿಭಾಗದಲ್ಲಿ ದೆಹಲಿ ರೆಡ್ಜ್ ತಂಡವು ಕೋಲ್ಕತ್ತಾ ಬಂಗಾ ಟೈಗರ್ಸ್ ತಂಡವನ್ನು ಎದುರಿಸಲಿದೆ. ಬಳಿಕ ಪುರುಷರ ವಿಭಾಗದಲ್ಲಿ ಚೆನ್ನೈ ಬುಲ್ಸ್ ಮತ್ತು ಹೈದರಾಬಾದ್ ಹೀರೋಸ್ ನಡುವಿನ ಪಂದ್ಯ ದಿನದ ಅಂತಿಮ ಮುಖಾಮುಖಿಯಾಗಿರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net