ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿರುವುದನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬೆಂಗಳೂರು ಬಂದ್ ಭಾಗಶಃ ಯಶಸ್ವಿಯಾದ ಬೆನ್ನಲ್ಲೆ ಕನ್ನಡಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಸಿದ್ದತೆ ನಡೆಸಿವೆ.
ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೊರ್ಟ್ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಮಾಡಿರುವ ಆದೇಶವನ್ನು ವಿರೋಧಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಸೆ. ೨೯ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ.
ಸೆ. ೨೯ರಂದು ಕರ್ನಾಟಕ ಬಂದ್ ಮಾಡಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ತಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು ಹಾಗೂ ಬಂದ್ ವೇಳೆ ಕಾವೇರಿ ವಿಚಾರವಷ್ಟೇ ಅಲ್ಲದೆ ಮಹದಾಯಿ ಮತ್ತು ಮೇಕೆದಾಟು ವಿಚಾರದ ಬಗ್ಗೆಯೂ ಪ್ರಸ್ತಾಪಿಸಲು ಎಂದು ನಿರ್ಧರಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ, ಸಿಎಂಗೆ ಮನವಿ
ಸೆ. ೨೯ರಂದು ಬೆಳಗ್ಗೆ ೧೧ ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ ಉದ್ಯಾನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತದೆ. ನಂತರ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಅದರಲ್ಲಿ ೧೦೦ಕ್ಕೂ ಹೆಚ್ಚಿನ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನಾ ಸಭೆ ನಂತರ ವಾಟಳ್ ನಾಗರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಮನವಿ ಸಲ್ಲಿಸುತ್ತಾರೆ.
ಬಂದ್‌ಗೆ ೧೦೦ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ:
೧೦೦ಕ್ಕೂ ಹೆಚ್ಚಿನ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್‌ಗೆ ಬೆಂಬಲ ನೀಡುತ್ತಿವೆ. ಅದರ ಜತೆಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಂಘಟನೆಗಳು, ವಕೀಲರ ಸಂಘ, ವರ್ತಕರ ಸಂಘ ಸೇರಿ ವಿವಿಧ ಸಂಘಟನೆಗಳ ಬಳಿ ಬೆಂಬಲ ನೀಡುವಂತೆ ಕೋರಿದ್ದಾರೆ. ರಾಜಕೀಯ ಪಕ್ಷಗಳು ನಮಗೆ ಬೆಂಬಲ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ವಿಮಾನನಿಲ್ದಾಣಕ್ಕೆ ಮುತ್ತಿಗೆ:
ಕರ್ನಾಟಕ ಬಂದ್ ವೇಳೆ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆಯನ್ನು ತೀವ್ರಗೊಳಿಸಲು ಒಕ್ಕೂಟ ನಿರ್ಧರಿಸಿದೆ.
ಕಾವೇರಿ ದಕ್ಷಿಣ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೆ ಇಡೀ ಕರ್ನಾಟಕದ ಆಸ್ಮಿತೆಯಾಗಿದೆ. ಹೀಗಾಗಿ ಸೆ. ೨೯ರಂದು ರಾಜ್ಯ ಬಂದ್ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಬಂದ್ ವೇಳೆ ಅಗತ್ಯ ವಸ್ತುಗಳ ಸಾಗಣೆ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನೂ ಸ್ಥಗಿತಗೊಳಿಸಲು ಮನವಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು. ನಮ್ಮದು ಶಾಂತಿಯುತ ಬಂದ್ ಆಗಿದ್ದು, ರಾಜ್ಯದ ಎಲ್ಲರೂ ಸಹಕರಿಸಬೇಕು. ಅದೇ ರೀತಿ ಪ್ರತಿ ಜಿಲ್ಲೆಯಲ್ಲೂ ಆಯಾ ಜಿಲ್ಲಾ ಸಂಘಗಳು ನಮಗೆ ಬೆಂಬಲ ನೀಡಲಿವೆ. ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೆ, ರೈತ ಸಂಘಗಳು, ಸಮುದಾಯಗಳ ಸಂಘಗಳು ಬೆಂಬಲ ನೀಡುತ್ತಿವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸೆ.29 ರ ಬಂದ್‌ಗೆ ಅವಕಾಶವಿಲ್ಲ:
ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ.೨೯ ರ ಬಂದ್‌ಗೆ ಅವಕಾಶವಿಲ್ಲ.
ಸಾರ್ವಜನಿಕರ ಆಸ್ತಿ ಹಾನಿ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇದನ್ನು ಮಾಡುವುದಿಲ್ಲ, ನ್ಯಾಯಾಲಯ ಮಾಡುತ್ತದೆ. ಬಂದ್ ಮಾಡುವ ಮುಂಚಿತವಾಗಿ ಸೂಚನೆಯನ್ನೂ ನೀಡಿದೆ.
ಡಿ.ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ