ಒಂದೇ ಸಾಲಿನಲ್ಲಿ 6 ಗ್ರಹಗಳು: ಅಪರೂಪದ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಿ! ಇಲ್ಲಿದೆ ಸಂಪೂರ್ಣ ಮಾಹಿತಿ... Planetary Alignment

Planetary Alignment
Published on

Planetary Alignment : ಹಲವು ವರ್ಷಗಳ ಬಳಿಕ ಆಗಸದಲ್ಲಿ ಸಂಭವಿಸುತ್ತಿರುವ ಖಗೋಳ ಕೌತುಕಕ್ಕೆ ಜನರು ಸಾಕ್ಷಿಯಾಗಲಿದ್ದಾರೆ. ಜನವರಿ ಮತ್ತು ಫೆಬ್ರವರಿ ನಡುವೆ ಮೈನವಿರೇಳಿಸುವ ವಿದ್ಯಮಾನವೊಂದು ಖಗೋಳದಲ್ಲಿ ಸಂಭವಿಸಲಿದೆ. ಗಮನಾರ್ಹ ಸಂಗತಿ ಏನೆಂದರೆ, ಅದು ಎಲ್ಲರಿಗೂ ಗೋಚರಿಸಲಿದೆ.

ಇದು ಆರು ಗ್ರಹಗಳ ಅಪರೂಪದ ಜೋಡಣೆಯಾಗಿದ್ದು, ಗ್ರಹ ಮೆರವಣಿಗೆಯನ್ನು ರೂಪಿಸುತ್ತದೆ. ಆರು ಗ್ರಹಗಳಲ್ಲಿ ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಮಾತ್ರ ಬರಿಗಣ್ಣಿನಿಂದ ಗೋಚರಿಸುತ್ತವೆ. ಈ ಜೋಡಣೆಯು ಫೆಬ್ರವರಿ 13ರವರೆಗೆ ಗೋಚರಿಸಲಿದೆ. ಇಲ್ಲಿ ಗ್ರಹಗಳು ಒಂದೇ ಸಾಲಿನಲ್ಲಿ ಇರುವಂತೆ ಗೋಚರವಾಗುತ್ತದೆ. ಆದರೆ, ವಾಸ್ತವಾಗಿ ಅವು ಕ್ರಾಂತಿವೃತ್ತದ ಸಮತಲದಲ್ಲಿ ಜೋಡಿಸಲ್ಪಟ್ಟಿರುತ್ತವೆ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ವಿಜ್ಞಾನಿ ಕ್ರಿಸ್ಫಿನ್ ಕಾರ್ತಿಕ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವು ಅತ್ಯಂತ ಪ್ರಕಾಶಮಾನವಾಗಿದ್ದು, ಬಿಳಿ ಚುಕ್ಕೆಯಂತೆ ಕಾಣುತ್ತದೆ. ಮಂಗಳ ಗ್ರಹವು ಅಪರೂಪದ ಕೆಂಪು ಬಣ್ಣದ ಛಾಯೆಯನ್ನು ಹೊಂದಿದ್ದರೆ, ಗುರು ಗ್ರಹವು ಪ್ರಕಾಶಮಾನವಾದ ಬಿಳಿ ಚುಕ್ಕೆಯಂತೆ ಹೊಳೆಯುತ್ತದೆ ಮತ್ತು ಶನಿ ಕೂಡ ಗೋಚರಿಸುತ್ತದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ತಿಳಿಸಿದ್ದಾರೆ.

ಬೈನಾಕುಲರ್​ಗಳ ಮೂಲಕ ಖಗೋಳ ವಿಸ್ಮಯವನ್ನು ವೀಕ್ಷಿಸುವವರಿಗೆ ಗುರುಗ್ರಹದ ನಾಲ್ಕು ಚಂದ್ರಗಳು ಸಹ ಗೋಚರಿಸುತ್ತವೆ. ಆದರೆ, ಯುರೇನಸ್ ಮತ್ತು ನೆಪ್ಚೂನ್ ವೀಕ್ಷಣೆಗೆ ದೂರದರ್ಶಕದ ಅಗತ್ಯವಿದೆ. ಈ ಗ್ರಹಗಳ ಜೋಡಣೆಯಲ್ಲಿ ಬುಧ ಶೀಘ್ರದಲ್ಲೇ ಸೇರಿಕೊಳ್ಳುತ್ತದೆ. ಬುದ್ಧ ಗ್ರಹವು ಮಾರ್ಚ್ 8 ರಿಂದ ಗೋಚರಿಸುತ್ತದೆ ಎಂದು ಗುರುಪ್ರಸಾದ್ ಹೇಳಿದ್ದಾರೆ.

ಗ್ರಹಗಳ ಸ್ಪಷ್ಟ ವೀಕ್ಷಣೆಯ ಅನುಭವಕ್ಕಾಗಿ, ಸೂರ್ಯಾಸ್ತದ ನಂತರ ಸಂಜೆ 7.30ರ ಸಮಯ ಉತ್ತಮವಾಗಿದೆ. ಆದರೆ, ನಂದಿ ಬೆಟ್ಟ, ಚಿಕ್ಕಮಗಳೂರು ಮತ್ತು ಕೊಡಗು ಮುಂತಾದ ಎತ್ತರದ ಪ್ರದೇಶಗಳಿಂದ ವೀಕ್ಷಣೆ ಮಾಡಿರುವ ಈ ಖಗೋಳ ವಿಸ್ಮಯ ಇನ್ನಷ್ಟು ರೋಮಾಂಚನವಾಗಿರುತ್ತದೆ. ಅಂದರೆ, ಯಾವುದೇ ಅಡೆತಡೆಯಿಲ್ಲದೇ ಅದ್ಭುತ ನೋಟವನ್ನು ನೀಡುತ್ತವೆ. ಈ ಗಮನಾರ್ಹ ಜೋಡಣೆಯ ಸಂಪೂರ್ಣ ಅನುಭವಕ್ಕೆ ಸ್ಪಷ್ಟ ಹವಾಮಾನವು ಕೂಡ ನಿರ್ಣಾಯಕವಾಗಿದೆ. ಮೋಡಗಳು ಕವಿದಿದ್ದರೆ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ.

ಈ ಖಗೋಳ ಕೌತುಕವನ್ನು ವೀಕ್ಷಿಸಲು ಇಚ್ಛಿಸುವವರಿಗೆ ಬೆಂಗಳೂರಿನ ಸುತ್ತಲೂ ನಕ್ಷತ್ರ ವೀಕ್ಷಣೆಯ ಅನೇಕ ಪ್ರವಾಸ ತಾಣಗಳಿವೆ. ಇದಲ್ಲದೆ, ರಿಸಾ ಖಗೋಳಶಾಸ್ತ್ರ ಕೇಂದ್ರವು ಜನವರಿ 24 ಮತ್ತು 25 ರಂದು ಕೊಡಗು ಮತ್ತು ತಮಿಳುನಾಡಿನ ಡೆಂಕಣಿಕೊಟ್ಟೈನಲ್ಲಿ ವಿಹಾರಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಸೌರ ದೂರದರ್ಶಕಗಳು ಮತ್ತು ನೇರ ಪ್ರಸಾರದಂತಹ ಸುಧಾರಿತ ಉಪಕರಣಗಳಿಂದ ಕೌತುಕವನ್ನು ಕಣ್ತುಂಬಿಕೊಳ್ಳಬಹುದು. ಜನವರಿ 25 ಮತ್ತು 26ರಂದು ಗ್ರೇಟ್ ಬಿಯಾಂಡ್ ಚಿಕ್ಕಬಳ್ಳಾಪುರದಲ್ಲಿ ಈ ಪ್ರವಾಸಗಳನ್ನು ಆಯೋಜಿಸುತ್ತಿದೆ, ಅಲ್ಲಿ ಹಗಲು ಮತ್ತು ರಾತ್ರಿ ಆಕಾಶ ವೀಕ್ಷಣೆಗಾಗಿ ಬಹು ದೂರದರ್ಶಕಗಳು ಲಭ್ಯವಿರುತ್ತವೆ.

ಇಂಥಾ ಒಂದು ಅಪರೂಪದ ಕ್ಷಣ ಹಲವು ವರ್ಷಗಳಿಗೆ ಒಮ್ಮೆ ಮಾತ್ರ ಬರುತ್ತವೆ. ಹೀಗಾಗಿ ಇಂಥಾ ಕ್ಷಣಗಳನ್ನು ಮಿಸ್​ ಮಾಡಿಕೊಳ್ಳಬಾರದು. ಸೌರವ್ಯೂಹದ ಸೌಂದರ್ಯವನ್ನು ವೀಕ್ಷಿಸಲು ಇದು ಒಂದು ಅನನ್ಯ ಅವಕಾಶವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net