

| ಶತಾವಧಾನಿ ಡಾ. ರಾ. ಗಣೇಶ್ ಮತ್ತು ಹರಿ ರವಿಕುಮಾರ್ ಅವರ ಇಂಗ್ಲಿಷ್ ಲೇಖನದ ಕನ್ನಡಾನುವಾದ.
| ಅನುವಾದ: ಕೆ.ಬಿ.ಎಸ್. ರಾಮಚಂದ್ರ (ಕೃಪೆ: ಪ್ರೇಕ್ಷಾ ಅಂತರ್ಜಾಲ ಪತ್ರಿಕೆ)
ಸಾವಿರ ವರ್ಷಗಳಿಗೂ ಮೀರಿದ ಕನ್ನಡ ಸಾಹಿತ್ಯಚರಿತ್ರೆಯಲ್ಲಿ 20ನೇ ಶತಮಾನದ ನವೋದಯಸಾಹಿತ್ಯವನ್ನು ಕನ್ನಡಸಾಹಿತ್ಯ ಪುನರುಜ್ಜೀವನದ ಸುವರ್ಣಯುಗವೆಂದು ಹೇಳಬಹುದು. ಈ ಕಾಲದ ಅನೇಕ ಕವಿಗಳು ಹಾಗೂ ಲೇಖಕರು ಬಹುಭಾಷಾಕೋವಿದರಾಗಿದ್ದುದಲ್ಲದೆ ವಿವಿಧ ಪ್ರಾದೇಶಿಕ ಭಾಷಾಸಾಹಿತ್ಯಗಳ ಸಮೃದ್ಧ ಸಾಂಸ್ಕೃತಿಕಝುರಿಗಳಿಂದ ನೇರವಾಗಿ ಸ್ಪೂರ್ತಿಗೊಂಡು ಬಗೆದುಂಬಿಸಿಕೊಳ್ಳುವ ಮೂಲಕ ಆ ಹೊತ್ತಿಗೆ ನಿಂತ ನೀರಾಗಿದ್ದ ನಮ್ಮ ತಾಯ್ನುಡಿಯ ಹೊಳೆಯ ಹರಿವನ್ನು ಹೊನಲಾಗಿ ಹಿಗ್ಗಿಸಿದರು.
ಕನ್ನಡದ ಮೇಲೆ ಬಂಗಾಳಿಭಾಷೆ ಹಾಗೂ ಸಾಹಿತ್ಯದ ಪ್ರಭಾವವು ಹತ್ತೊಂಬತ್ತನೆಯ ಶತಮಾನದ ಪ್ರಮುಖ ವ್ಯಕ್ತಿಗಳಿಂದ ಮೊದಲಾಯಿತು. ವಿಶೇಷವಾಗಿ ಅಧ್ಯಾತ್ಮಿಕ ಗುರುಗಳು, ಸಮಾಜ ಸುಧಾರಕರು ಹಾಗೂ ರಾಷ್ಟ್ರವಾದಿಗಳಾದ ರಾಮಕೃಷ್ಣ ಪರಮಹಂಸ (1836-1886), ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-1894), ರವೀಂದ್ರನಾಥ ಠಾಕುರ್ (1861-1941), ಸ್ವಾಮಿ ವಿವೇಕಾನಂದ (1863-1902), ಅರವಿಂದ ಘೊಷ್ (1872-1950) ಮೊದಲಾದವರು ಈ ಪಂಕ್ತಿಯಲ್ಲಿ ಅಗ್ರಗಣ್ಯರು. ಹೀಗಾಗಿ ಕನ್ನಡಲೇಖಕರ ಬಂಗಾಳದ ನಂಟು ಅಧ್ಯಾತ್ಮ, ರಾಷ್ಟ್ರವಾದ ಹಾಗೂ ಸಮಾಜ ಸುಧಾರಣೆಗಳಿಂದಾಯಿತೆಂದರೆ ತಪ್ಪಾಗಲಾರದು.
ಪ್ರಾಯಶಃ ಬಂಗಾಳಿ ಸಾಹಿತ್ಯವನ್ನು ಮೊದಲ ಬಾರಿ ಕನ್ನಡಕ್ಕೆ ಅನುವಾದರೂಪವಾಗಿ ತಂದವರು ಬಿಂಡಿಗನವಿಲೆ ವೆಂಕಟಾಚಾರ್ಯರು. ಸ್ವಾಮಿ ವಿವೇಕಾನಂದರ ಸಮಕಾಲೀನರಾಗಿದ್ದ ಅವರು ಬಂಕಿಮಚಂದ್ರ ಮತ್ತಿತರರ ಅನೇಕ ಕಾದಂಬರಿಗಳನ್ನು ಅನುವಾದಿಸಿದರು. ಅವರಿಗೆ ಬಂಗಾಳಿ ಭಾಷೆಯ ಕುರಿತು ಪ್ರೀತಿ ಎಷ್ಟಿತ್ತೆಂದರೆ, ಅದನ್ನು ಮನೆಯವರಿಗಲ್ಲದೆ ನೆರೆಹೊರೆಯವರಿಗೂ ಕಲಿಸಿದ್ದರು. ಬೆಂಗಳೂರಿಗೆ ಬಂದಾಗ ವೆಂಕಟಾಚಾರ್ಯರ ಮನೆಯಲ್ಲಿ ಕೆಲಕಾಲ ತಂಗಿದ್ದ ವಿವೇಕಾನಂದರು ಅಲ್ಲಿ ಎಲ್ಲರೂ ಬಂಗಾಳಿಯಲ್ಲಿ ಮಾತಾಡುವುದನ್ನು ಕೇಳಿ ತುಂಬ ಆಶ್ಚರ್ಯಪಟ್ಟರಂತೆ.
ಸ್ವಾಮಿ ವಿವೇಕಾನಂದರ ಪ್ರಭಾವವಂತೂ ಹಲವು ತಲೆಮಾರಿನ ಕನ್ನಡ ಲೇಖಕರ ಮೇಲೆ ಗಾಢವಾಗಿ ಆಗಿದೆ. ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಡಿ.ವಿ. ಗುಂಡಪ್ಪ, ಕುವೆಂಪು ಮುಂತಾದವರಿಂದ ಮೊದಲುಗೊಂಡು ಈಚಿನ ಕನ್ನಡದ ಅತ್ಯುತ್ತಮ ಲೇಖಕರಾದ ಎಸ್.ಎಲ್. ಭೈರಪ್ಪನವರವರೆಗೆ ಈ ವ್ಯಾಪ್ತಿಯನ್ನು ಕಾಣಬಹುದು. ವೆಂಕಣ್ಣಯ್ಯ ಮತ್ತು ಕೃಷ್ಣಶಾಸ್ತ್ರಿಗಳು ರಾಮಕೃಷ್ಣ, ವಿವೇಕಾನಂದರ ಮೊತ್ತಮೊದಲ ಜೀವನಚರಿತ್ರೆಗಳನ್ನು ಕನ್ನಡದಲ್ಲಿ ಬರೆದರು. ರಾಮಕೃಷ್ಣಾಶ್ರಮದೊಂದಿಗೆ ಹತ್ತಿರದ ಸಂಬಂಧ ಹೊಂದಿದ್ದ ಕುವೆಂಪು ರಾಮಕೃಷ್ಣ ಹಾಗೂ ವಿವೇಕಾನಂದರ ಉಪದೇಶಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಅವರಿಬ್ಬರ ಜೀವನಚರಿತ್ರೆಗಳನ್ನು ಕನ್ನಡದಲ್ಲಿ ಬರೆಯುವುದರೊಂದಿಗೆ, ಸ್ವಾಮಿ ಶಿವಾನಂದರ ಹಲವು ಬರವಣಿಗೆಗಳನ್ನು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಕನ್ನಡ ಸಾಹಿತಿಗಳ ಮೇಲೆ ಬಹಳಷ್ಟು ಪ್ರಭಾವ ಬೀರಿದ ಮತ್ತೊಬ್ಬರೆಂದರೆ ಅರವಿಂದರು. ಕುವೆಂಪು, ಬೇಂದ್ರೆ ಹಾಗೂ ಗೋಕಾಕರಲ್ಲದೆ; ಅನುಭಾವಕವಿ, ಬಹುಭಾಷಾಕೋವಿದರಾದ ಮಧುರಚೆನ್ನರೂ ಸೇರಿ ಹಲವರು ಅವರ ಅಭಿಮಾನಿಗಳಾಗಿದ್ದರು. ಕೋ. ಚೆನ್ನಬಸಪ್ಪನವರು ಅರವಿಂದರ ಲೈಫ್ ಡಿವೈನ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸುತ್ತಿರುವಾಗ ಅಲ್ಲಿಯ ಕೆಲವು ಕಠಿನಶಬ್ದಗಳು ಹಾಗೂ ಅವುಗಳ ವಿನಿಯೋಗದ ಬಗೆಗೆ ಸಂದೇಹ ಉಂಟಾದಾಗ, ಅರವಿಂದರೇ ಒಪ್ಪಿದ್ದ ಬಂಗಾಳಿ ಅನುವಾದವನ್ನು ನೋಡುತ್ತಿದ್ದರಂತೆ.
ಡಿ.ವಿ.ಜಿ., ಬಿ.ಎಂ.ಶ್ರೀ., ಮಾಸ್ತಿ, ಬೇಂದ್ರೆ ಹಾಗೂ ಕೃಷ್ಣಶಾಸ್ತ್ರಿಗಳನ್ನು ಮೊದಲುಗೊಂಡು, ನವೋದಯ ಯುಗದ ಹೆಚ್ಚಿನ ಸಾಹಿತಿಗಳು ಕನಿಷ್ಠ ಆರೇಳು ಭಾಷೆಗಳನ್ನು ಬಲ್ಲವರಾಗಿದ್ದರು. ಎಸ್. ಶ್ರೀಕಂಠ ಶಾಸ್ತ್ರಿಗಳು ಹದಿನೇಳು ಭಾಷೆಗಳನ್ನು ಬಲ್ಲವರಾಗಿದ್ದರೆ, ಗೋವಿಂದ ಪೈಗಳು ಇಪ್ಪತ್ತೆರಡು ಭಾಷೆಗಳ ಪರಿಚಯ ಪಡೆದಿದ್ದರು. ಕನ್ನಡದಲ್ಲಿ ತಲೆದೋರಿದ ನವ್ಯಸಾಹಿತ್ಯಾಂದೋಲನವು ಇಂಥ ಬಹುಭಾಷಾಪ್ರಾವೀಣ್ಯದ ಸಾವನ್ನು ಕಂಡರೆ, ಅನಂತರದ ‘ಕ್ರಾಂತಿಕಾರಿ’ ಆಂದೋಲನಗಳು ಕನ್ನಡಸಾಹಿತ್ಯದಿಂದ ಕನ್ನಡವನ್ನೇ ತೆಗೆದುಹಾಕಿವೆಯೆಂದರೆ ತಪ್ಪಲ್ಲ. ನವೋದಯದ ಪ್ರಮುಖರ ಪೈಕಿ ಬಂಗಾಳಿಯಲ್ಲಿ ಧಾರಾಳವಾಗಿ ನುರಿತವರೆಂದರೆ ಗೋವಿಂದ ಪೈ, ಟಿ.ಎಸ್. ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿ, ಕುವೆಂಪು, ಮಾಸ್ತಿ, ಬೇಂದ್ರೆ, ಮಧುರಚೆನ್ನ, ವಿ. ಸೀ., ಪ್ರಹ್ಲಾದ ನರೇಗಲ್ಲ, ಪಾ.ವೆಂ. ಆಚಾರ್ಯ, ಕೆ. ಕೃಷ್ಣಮೂರ್ತಿ ಮೊದಲಾದವರು.
ಬಂಕಿಮರ ಕೃತಿಗಳು ಮೊದಲು ಕನ್ನಡದಲ್ಲಿ ದೊರೆತಾಗ ನಮ್ಮ ಜನತೆಗೆ ಬಂಗಾಳಿಯಲ್ಲಿ ಆಸಕ್ತಿ ಹುಟ್ಟಿತು. ಠಾಕುರರ ಆಗಮನದಿಂದ ಬಂಗಾಳಿ ಕಲಿಯುವ ಹುಚ್ಚು ಇನ್ನೂ ಹೆಚ್ಚಿತು. ಮಾಸ್ತಿಯವರು ಠಾಕುರರ ಕುರಿತು ಬರೆದರು. ವೆಂಕಣ್ಣಯ್ಯನವರು ಠಾಕುರರ ಹಾಗೂ ಬಂಕಿಮರ ಹಲವು ಲೇಖನಗಳನ್ನು ಅನುವಾದಿಸಿದರು. ಕೃಷ್ಣಶಾಸ್ತ್ರಿಗಳು ‘ನಿಬಂಧಮಾಲಾ’ ಎಂಬ ಹೆಸರಿನಲ್ಲಿ ಠಾಕುರರ ಲೇಖನಗಳ ಮೂರು ಸಂಪುಟಗಳನ್ನು ಅನುವಾದಿಸಿದರು. ಎಚ್.ವಿ. ಸಾವಿತ್ರಮ್ಮನವರು ಠಾಕುರರ ಅನೇಕ ಕಾದಂಬರಿಗಳನ್ನು ಅನುವಾದಿಸಿದರು.
ನವೋದಯ ಲೇಖಕರ ಪೈಕಿ ಶಿವರಾಮ ಕಾರಂತರಿಗೆ ಬಂಗಾಳಿಯ ಪರಿಚಯವಿಲ್ಲದಿದ್ದರೂ ಠಾಕುರರಿಂದ ಬಹಳವಾಗಿ ಪ್ರಭಾವಿತರಾಗಿದ್ದ ಅವರು ಠಾಕುರರಂತೆಯೇ ಇದ್ದರು. ಕಾರಂತರು ಕವಿತೆಗಳನ್ನು ಬರೆಯದಿದ್ದರೂ ಠಾಕುರರಂತೆ ಕಥೆ, ಕಾದಂಬರಿ, ಪ್ರವಾಸಕಥನಗಳನ್ನು ಬರೆದರು. ಅವರು ಚಿತ್ರಕಾರರೂ ಆಗಿದ್ದರು. ಯಕ್ಷಗಾನಕಲೆಯನ್ನು ಬಲುಮಟ್ಟಿಗೆ ಒಬ್ಬಂಟಿಯಾಗಿ ಪುನರುಜ್ಜೀವನಗೊಳಿಸಿದರು. ಪ್ರಕೃತಿಯ ನಡುವಿನಲ್ಲಿ ಶಾಲೆಯನ್ನು ನಡೆಸಿದರು. ವಿಜ್ಞಾನ ಹಾಗೂ ವಿಜ್ಞಾನಸಂಬಂಧಿವಿಷಯಗಳನ್ನು ಕುರಿತು ಬರೆದರು. ಭಾರತೀಯ ಕಲೆ, ಶಿಲ್ಪಕಲೆಗಳ ಬಗೆಗೂ ಬರೆದರು. ಅನೇಕ ಪ್ರವಾಸಗಳನ್ನು ಕೈಗೊಂಡರು. ಹೀಗೆ ಕಾರಂತರಲ್ಲಿ ಠಾಕುರರೊಂದಿಗೆ ಎಷ್ಟೋ ಸಾಮ್ಯಗಳನ್ನು ಕಾಣಬಹುದು.
ಠಾಕುರರನ್ನುಳಿದು ಶರಚ್ಚಂದ್ರ ಚಟ್ಟೋಪಾಧ್ಯಾಯ ಮತ್ತು ವಿಭೂತಿಭೂಷಣ ಬಂದೋಪಾಧ್ಯಾಯರ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಾಗ ಅವು ನಮ್ಮ ಓದುಗರಿಂದ ಹೆಚ್ಚಿನ ಮೆಚ್ಚುಗೆ ಪಡೆದವು. ಶರಚ್ಚಂದ್ರರ ಎಲ್ಲ ಕಾದಂಬರಿಗಳೂ ಕನ್ನಡಕ್ಕೆ ಅನುವಾದಗೊಂಡವು. ಬೇಂದ್ರೆಯವರು ಬಂಗಾಳಿಯ ನೂರೊಂದು ಕವಿತೆಗಳನ್ನು ಕನ್ನಡೀಕರಿಸಿದರು. ಪತ್ರಕರ್ತರಾದ ಪಾ.ವೆಂ. ಆಚಾರ್ಯರು ಅನೇಕ ಬಂಗಾಳಿ ಕೃತಿಗಳನ್ನು ವಿವಿಧ ಕಾವ್ಯನಾಮಗಳಲ್ಲಿ ಅನುವಾದಿಸಿದರು. ಎಂ.ಎಸ್. ಕೃಷ್ಣಮೂರ್ತಿಗಳು ಬಂಗಾಳಿಯ ಆಧ್ಯಾತ್ಮಿಕಕವಿಗಳನ್ನು ಕುರಿತು ಬರೆದರು ಹಾಗೂ 15ನೇ ಶತಮಾನದ ಬಂಗಾಳಿ ಕವಿ ಚಂಡೀದಾಸನ ಕೃತಿಗಳನ್ನು ಅನುವಾದಿಸಿದರು.
ಬಂಗಾಳಿ ಸಾಹಿತಿಯೊಬ್ಬರ ಕುರಿತ ಕನ್ನಡದ ಕೃತಿಗಳಲ್ಲಿ ಗಣನೀಯವಾದದ್ದು ಎ.ಆರ್. ಕೃಷ್ಣಶಾಸ್ತ್ರಿಗಳು ಬಂಕಿಮಚಂದ್ರರ ಕಾದಂಬರಿಗಳು ಹಾಗೂ ಇನ್ನಿತರ ಬರವಣಿಗೆಗಳನ್ನು ಕುರಿತು ಬರೆದ ದೀರ್ಘಸಂಶೋಧನಪ್ರಬಂಧ. ಇದಕ್ಕೆ ಕೇಂದ್ರಸಾಹಿತ್ಯ ಅಕಾಡಮಿಯ 1961ರ ಪ್ರಶಸ್ತಿ ದೊರಕಿದ್ದಲ್ಲದೆ ಬಂಕಿಮರ ಬರವಣಿಗೆಗಳನ್ನು ಕುರಿತಂತೆ ಇದಕ್ಕೆ ಸಮನಾದ ಕೃತಿಯು ಮತ್ತಾವ ಭಾಷೆಯಲ್ಲಿಯೂ ಬಂದಿಲ್ಲವೆಂಬುದು ಪಂಡಿತರ ಅಭಿಪ್ರಾಯ.
ಎಲ್ಲ ಭಾರತೀಯಭಾಷೆಗಳಿಗೆ ಸಂಸ್ಕೃತವು ಮೂಲವಾಗಿದ್ದರೂ ಕಳೆದ ಎರಡು ಸಹಸ್ರಮಾನಗಳಲ್ಲಿ ಎಲ್ಲವೂ ತಮ್ಮಂತೆಯೇ ವೃದ್ಧಿಗೊಂಡು, ಸಮೃದ್ಧವಾದ ಸಾಹಿತ್ಯಕಪರಂಪರೆಗಳನ್ನು ಹೊಂದಿವೆ. ಪ್ರಾದೇಶಿಕ ಭಾಷೆಗಳನ್ನಾಡುವವರು ಇತರ ಭಾಷೆಗಳವರೊಂದಿಗೆ ಸದಾ ಸಂಪರ್ಕದಲ್ಲಿದ್ದ ಚರಿತ್ರೆ ನಮ್ಮದಾಗಿದ್ದು, ಎಲ್ಲ ಭಾಷೆಗಳು ಪರಸ್ಪರ ಮೈತ್ರಿಯಿಂದ ವೃದ್ಧಿ ಹೊಂದಿವೆ. ಈ ನಿಟ್ಟಿನಲ್ಲಿ ಪರಿಶೀಲಿಸಿದಾಗ ಈಚಿನ ವಿಪರ್ಯಾಸವೊಂದು ನಮ್ಮ ಮನವನ್ನು ಕಲಕದಿರದು. ಅದೆಂದರೆ ಇಂದಿನ ಅಂಗ್ಲಭಾಷಾಮಾತ್ರಕೇಂದ್ರಿತವಾದ ಶಿಕ್ಷಣವ್ಯವಸ್ಥೆಯಿಂದಾಗಿ ಇತರ ಭಾಷೆಗಳೊಡನಿರಲಿ, ನಮ್ಮ ನಮ್ಮ ತಾಯ್ನುಡಿಗಳೊಂದಿಗೇ ನಮಗೆ ಸಂಪರ್ಕವಿಲ್ಲದಂತಾಗಿದೆ. ಇದರೊಂದಿಗೆ ಪ್ರಾದೇಶಿಕ ದುರಭಿಮಾನದ ವಿಷಸರ್ಪವೂ ಆಗಾಗ ಹೆಡೆಯೆತ್ತುತ್ತಿರುತ್ತದೆ. ಭಾಷಾಂತರ, ಅನುವಾದ ಮತ್ತಿತರ ವಿಧಾನಗಳ ಮೂಲಕ ವಿಭಿನ್ನ ಭಾರತೀಯ ಭಾಷೆಗಳ ನಡುವೆ ಹಾಗೂ ಅವುಗಳೊಡನೆ ನಮಗೆ ಏರ್ಪಡಬಹುದಾದ ಸಂಪರ್ಕವು ಮತ್ತೂ ಅರ್ಥಪೂರ್ಣವಾಗಬೇಕೆಂದರೆ ಅದು ಎಲ್ಲ ಭಾರತೀಯರಿಗೂ ಸಮಾನವಾದ ಯಾವುದಾದರೂ ತಳಹದಿಯ ಮೇಲೆ ಆಗಬೇಕು. ಅದು ಸನಾತನಧರ್ಮದ ಅಧ್ಯಾತ್ಮವೋ, ರಾಷ್ಟ್ರವಾದವೋ, ಅಥವಾ ಸ್ವೋಪಜ್ಞಸಮಾಜಸುಧಾರಣೆಯ ಮೂಲಕವೋ ಆಗಬೇಕಲ್ಲದೆ ಬೇರೆ ಮಾರ್ಗಗಳಿಂದ ಸಾಧಿಸುವುದು ಸುಲಭವಲ್ಲ.