VIDEO| ಚುನಾವಣಾ ಪ್ರಚಾರದ ಕೊನೆಯ ದಿನ ರಾಷ್ಟ್ರಗೀತೆಗಾಗಿ ವ್ಹೀಲ್​ಚೇರ್​ನಿಂದ ಎದ್ದು ನಿಂತ ದೀದಿ..!

Didi 1
Published on

ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೈವೋಲ್ಟೇಜ್​ ಕ್ಷೇತ್ರವಾದ ನಂದಿಗ್ರಾಮದಲ್ಲಿನ ಕೊನೆಯ ದಿನದ ಚುನಾವಣ ಪ್ರಚಾರವು ನಾಟಕೀಯ ಅಂತ್ಯವನ್ನು ಪಡೆದುಕೊಂಡಿತು. ನಾಮಪತ್ರದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ನಿನ್ನೆ ಚುನಾವಣಾ ಪ್ರಚಾರದ ಕೊನೆಯ ದಿನ ವ್ಹೀಲ್​ಚೇರ್​ನಿಂದ ಎದ್ದು ನಿಲ್ಲುವ ಮೂಲಕ ಪ್ರಚಾರಕ್ಕೆ ತೆರೆ ಎಳೆದರು.

ಸಾಲು ಸಾಲು ಚುನಾವಣಾ ಸಮಾವೇಶಗಳ ಬಳಿಕ ಕೊನೆಯ ಹಂತದ ಪ್ರಚಾರದ ವೇಳೆ ಮಮತಾ ಅವರು ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆಂದು ಒತ್ತಾಯಿಸಲಾಯಿತು. ಈ ವೇಳೆ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಪಕ್ಷದ ಸುಬ್ರತ್​ ಬಕ್ಷಿ ಮತ್ತು ಡೊಲಾ ಸೆನ್​, ರಾಷ್ಟ್ರಗೀತೆ ವೇಳೆ ಮಮತಾ ಅವರು ಎದ್ದು ನಿಲ್ಲಲು ಸಹಾಯ ಮಾಡಿದರು.

ವ್ಹೀಲ್​ಚೇರ್​ನಿಂದ ಎದ್ದು ನಿಂತ ಮಮತಾ, ರಾಷ್ಟ್ರಗೀತೆ ವೇಳೆ ಒಂದೇ ಕಾಲಿನಲ್ಲಿ ನಿಂತಿದ್ದರು. ಈ ಮೂಲಕ ತಮ್ಮ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ತೆರೆ ಎಳೆದರು.

ಅಂದಹಾಗೆ ಮಾರ್ಚ್​ 11ರಂದು ತಮ್ಮ ಕ್ಷೇತ್ರ ನಂದಿಗ್ರಾಮದಲ್ಲಿ ರೋಡ್​ಶೋ ನಡೆಸುವ ವೇಳೆ ಮಮತಾ ಅವರು ಕಾಲಿಗೆ ನೋವು ಮಾಡಿಕೊಂಡಿದ್ದರು. ಆದರೆ, ಇದು ಭಾರತೀಯ ಜನತಾ ಪಾರ್ಟಿಯ ದುಷ್ಕೃತ್ಯ, ಅವರ ಗೂಂಡಾಗಳು ಮಾಡಿದ ಕೆಲಸ ಎಂದು ಟಿಎಂಸಿ ಮುಖ್ಯಸ್ಥ ಆರೋಪಿಸಿದ್ದರು. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನ ಬಾಗಿಲಿನಿಂದಾಗಿ ಈ ಅಚಾತುರ್ಯ ನಡೆಯಿತು ಎಂದು ಹೇಳಲಾಗಿದೆ.

ಏಪ್ರಿಲ್​ 1ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಹೈವೋಲ್ಟೇಜ್​ ಕ್ಷೇತ್ರ ನಂದಿಗ್ರಾಮವೂ ಸೇರಿದೆ. ಏಕೆಂದರೆ ಇದು ಹಾಲಿ ಮುಖ್ಯಮಂತ್ರಿ ಮಮತಾ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಇವರ ವಿರುದ್ಧ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರವಲ ಪೈಪೋಟಿ ಇದೆ. ಸುವೆಂದು ಅಧಿಕಾರಿ ಅವರು ಈ ಹಿಂದೆ ಟಿಎಂಸಿಯಲ್ಲಿ ಮಮತಾ ಅವರ ನಂಬಿಕಸ್ಥರಾಗಿದ್ದರು. ಆದರೆ, ಪಕ್ಷ ತೊರೆದು ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಈ ಚುನಾವಣೆ ಬಹಳ ಕುತೂಹಲ ಮೂಡಿಸಿದೆ.

ನಂದಿಗ್ರಾಮ್ ಚುನಾವಣಾ ಪ್ರಚಾರದ ಕೊನೆಯ ದಿನ, ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸಮಾವೇಶಗಳನ್ನು ನಡೆಸಿದರೆ, ಅವರ ಎದುರಾಳಿ ಸುವೆಂದು ಅಧಿಕಾರಿಯು, ಕೇಂದ್ರ ಗೃಹ ಸಚಿವ ಅಮಿತ್ ಷಾರೊಂದಿಗೆ ಕ್ಷೇತ್ರದ ರೋಡ್​ ಶೋನಲ್ಲಿ ಭಾಗವಹಿಸಿದರು.

ಅಂದಹಾಗೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮನತದಾನ ನಡೆಯಲಿದೆ. ಏಪ್ರಿಲ್​ 29ಕ್ಕೆ ಮತದಾನ ಮುಗಿಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net