ಲಾಭದತ್ತ ಶ್ರೀ ಗುರುಮಲ್ಲೇಶ್ವರ ಸೊಸೈಟಿ

ನಂಜನಗೂಡಿನ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸೊಸೈಟಿಯ ವಾರ್ಷಿಕ ಮಹಾಸಭೆಯನ್ನು ಸೊಸೈಟಿ ಅಧ್ಯಕ್ಷೆ ನಂದಿನಿ ಮಹೇಶ್ ಉದ್ಘಾಟಿಸಿದರು. ಅಂಬಿಕಾ ಹುಸ್ಕೂರು, ನೇತ್ರಾವತಿ, ಉಷಾ, ಕೋಮಲಾ ಮತ್ತಿತರರಿದ್ದರು.
ನಂಜನಗೂಡಿನ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸಹಕಾರಿ ಸೊಸೈಟಿಯ ವಾರ್ಷಿಕ ಮಹಾಸಭೆಯನ್ನು ಸೊಸೈಟಿ ಅಧ್ಯಕ್ಷೆ ನಂದಿನಿ ಮಹೇಶ್ ಉದ್ಘಾಟಿಸಿದರು. ಅಂಬಿಕಾ ಹುಸ್ಕೂರು, ನೇತ್ರಾವತಿ, ಉಷಾ, ಕೋಮಲಾ ಮತ್ತಿತರರಿದ್ದರು.
Published on

ನಂಜನಗೂಡು: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಕುಟುಂಬವನ್ನು ಮುನ್ನಡೆಸುವಂತಾಗಬೇಕು ಎಂಬ ಆಶಯದೊಂದಿಗೆ ಕಳೆದ 10 ವರ್ಷದ ಹಿಂದೆ ತೆರೆದ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸೊಸೈಟಿಯು ಪ್ರತಿವರ್ಷ ಲಾಭದತ್ತ ಮುನ್ನಡೆಯುತ್ತಿದ್ದು, ಈ ಬಾರಿ 8.76 ಲಕ್ಷ ರೂ. ಲಾಭ ಗಳಿಸಿದೆ ಎಂದು ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸೊಸೈಟಿ ಅಧ್ಯಕ್ಷೆ ನಂದಿನಿ ಮಹೇಶ್ ಹೇಳಿದರು.

ನಗರದ ನಂದಿ ಕನ್ವೆನ್ಶನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರ ವಿವಿಧೋದ್ದೇಶ ಮಹಿಳಾ ಸೌಹಾರ್ದ ಸೊಸೈಟಿಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ತಮ್ಮ ಕುಟುಂಬವನ್ನು ಮುನ್ನಡೆಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಎಂಬ ಕನಸಿನೊಂದಿಗೆ ಕಳೆದ 10 ವರ್ಷಗಳ ಹಿಂದೆ ತೆರೆಯಲಾದ ಈ ಸೊಸೈಟಿಯಲ್ಲಿ ಸಾವಿರಾರು ಮಹಿಳೆಯರು ಷೇರುದಾರರಾಗಿ ಸಾಲವನ್ನು ಪಡೆಯುತ್ತ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತಿದೆ. ಇದರಿಂದ ಮಹಿಳೆಯರಿಗೂ ಆರ್ಥಿಕ ಶಿಸ್ತು ಹಾಗೂ ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ವಾರ್ಷಿಕವಾಗಿ ಎರಡು ಕೋಟಿ ರೂ. ವ್ಯವಹಾರ ಹೊಂದಿರುವ ನಮ್ಮ ಸೊಸೈಟಿಯಲ್ಲಿ 8.76 ಲಕ್ಷ ರೂ. ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸೊಸೈಟಿಯು ಕೇವಲ ಆರ್ಥಿಕ ವ್ಯವಹಾರವನ್ನಷ್ಟೇ ಮಾಡದೇ ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿರುವ ಆತ್ಮತೃಪ್ತಿ ನಮಗಿದೆ. ಇನ್ನು ಸಂಘಕ್ಕೆ ಈಗಾಗಲೇ ಮಹದೇಶ್ವರ ಲೇಔಟ್ ಬಳಿ ನಿವೇಶನವನ್ನು ಮುಡಾದಿಂದ ಖರೀದಿ ಮಾಡಲಾಗಿದ್ದು, ಮುಂದಿನ ಆಡಳಿತ ಮಂಡಳಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸ್ವಂತ ಕಾರ್ಯಾಲಯ ಹೊಂದುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.

ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅಂಬಿಕಾ ಹುಸ್ಕೂರು ಮಾತನಾಡಿ, ಎಲ್ಲಾ ಕಾಲಘಟ್ಟದಲ್ಲಿ ಮಹಿಳೆಯರನ್ನು ಅತ್ಯಂತ ತಾರತಮ್ಯದಿಂದ ನಡೆಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇದಕ್ಕಾಗಿ ಬಸವಾದಿ ಶರಣರು ಮಹಿಳೆಯರಿಗೆ ಸಮಾಜ ಅವಕಾಶ ಹಾಗೂ ಗೌರವದಿಂದ ಕಾಣುವ ಮೂಲಕ ಮಹಿಳೆಯರೂ ಕೂಡ ಪುರಷರಷ್ಟೇ ಸಮಾನರು ಎಂಬುದನ್ನು ಸಾರಿ ಹೇಳಿದ್ದಾರೆ. ಅವರ ಆಶಯದಂತೆ ಮಹಿಳೆಯರು ಕೂಡ ಎಲ್ಲಾ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ತಮ್ಮದೇ ಕಾರ್ಯಚಟುವಟಿಕೆಗಳ ಮೂಲಕ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸೊಸೈಟಿ ಮುಖ್ಯ ಕಾರ್ಯನಿರ್ವಾಹಕಿ ನೇತ್ರಾವತಿ ವಾರ್ಷಿಕ ಆಯವ್ಯಯ ಮಂಡಿಸಿದರು. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕಿ ನೇತ್ರಾವತಿ, ಉಪಾಧ್ಯಕ್ಷೆ ಉಷಾ, ನಿರ್ದೇಶಕರಾದ ಕೋಮಲಾ ಮಹಾಲಿಂಗಸ್ವಾಮಿ, ಗುಣವತಿ, ಭ್ರಮರಾಂಬಿಕಾ, ಸುಜಾತಾ, ಶ್ರೀಧರಿ, ಚೈತ್ರಾ, ಶಿವಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net