

ಚಿಕ್ಕಮಗಳೂರು: ತೆಂಗು ಕೃಷಿಯನ್ನು ಕೇವಲ ಆಹಾರಕ್ಕಾಗಿ ಅಥವಾ ಆರ್ಥಿಕ ಲಾಭಕ್ಕಾಗಿ ಬೆಳೆಸುವುದಿಲ್ಲ. ತೆಂಗು ಆಧ್ಯಾತ್ಮಿಕವಾಗಿಯೂ ಮಹತ್ವದ್ದು ಎನ್ನುವ ಭಾವನೆ ನಮ್ಮಲ್ಲಿದೆ. ತೆಂಗನ್ನು ವೈಜ್ಞಾನಿಕವಾಗಿ ಬೆಳೆಸಿದಾಗ ಮಾತ್ರ ಲಾಭಗಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿಸಿದರು.
ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಮೂಡಿಗೆರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಂಗು ರೈತರಿಗೆ ಅಗತ್ಯ ಹಾಗೂ ಉಪಯುಕ್ತ ಬೆಳೆಯಾಗಿದೆ. ಆದಾಯ, ಆರೋಗ್ಯ ಮತ್ತು ಆನಂದ ನೀಡುವ ಅಪರೂಪದ ಕಲ್ಪವೃಕ್ಷ. ಎಲ್ಲ ಪೂಜಾ ಕಾರ್ಯಕ್ರಮಗಳಿಗೆ ತೆಂಗು ಬೇಕು. ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಬೆಳೆಗಾರರು ಚಿಂತಿಸದಿದ್ದರೆ ತೆಂಗಿನ ಕೃಷಿಯನ್ನು ಲಾಭದಾಯವಾಗಿಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ರೈತರು ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.
ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೆಂಗು ಕೃಷಿಯನ್ನು ಅವಲಂಬಿಸಿದ್ದಾರೆ. ತೆಂಗು ಕೃಷಿಗೆ ಉತ್ತೇಜನ ನೀಡಲು ಸರ್ಕಾರ ತೆಂಗು ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದೆ. ವಿಶ್ವದಲ್ಲಿಯೇ ದೇಶ ತೆಂಗಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ ತೆಂಗಿನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯವರೆಗೆ ಕೊಂಡೊಯ್ಯುವತ್ತ ರೈತರು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಕೃಷ್ಣಮೂರ್ತಿ ಮಾತನಾಡಿ, ತೆಂಗಿನ ನಾರಿನ ಉತ್ಪನ್ನಗಳಿಗೆ ಇತರೆ ರಾಜ್ಯಗಳಲ್ಲೂ ಬಹಳಷ್ಟು ಬೇಡಿಕೆಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೆಂಗು ಬೆಳೆ ವ್ಯಾಪಕವಾಗಿದೆ. ತೆಂಗಿನ ನಾರಿನ ಉತ್ಪನ್ನಗಳ ಉದ್ಯಮಗಳಿಗೆ ವಿಫುಲ ಅವಕಾಶದ ಜತೆಗೆ ಪರಿಸರ ಸ್ನೇಹಿ ಉತ್ಪನ್ನವಾಗಿದೆ ಎಂದು ತಿಳಿಸಿದರು.
ತೆಂಗು ಬಹಳ ರೈತರಿಗೆ ಸ್ಥಿರ ಆದಾಯ ತಂದುಕೊಡುವ ಬೆಳೆಯಾಗಿದ್ದು ಲಾಭದಾಯಕ ಬೆಳೆಯಾಗಿದೆ. ತೆಂಗಿನ ಮರದಿಂದ ಸಿಗುವ ವಿವಿಧ ರೀತಿಯ ಉತ್ಪನ್ನಗಳು ತೆಂಗು, ಎಳನೀರು ಇತ್ಯಾದಿಯಿಂದ ಆಗುವ ಪ್ರಯೋಜನಗಳು ಬಹಳಷ್ಟಿದೆ ಎಂದು ಹೇಳಿದರು.
ತೋಟಗಾರಿಕಾ ಸಂಸ್ಕರಣ, ಮಾರಾಟ ಸಹಕಾರ ಸಂಘದ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ ಮಾತನಾಡಿ, ರೈತರು ತೆಂಗು ಬೆಳೆ ಬೆಳೆಯಲು ಸಾವಯವ ಪದ್ಧತಿ ಅನುಸರಿಸಿದರೆ ಒಂದು ಮರಕ್ಕೆ ಸುಮಾರು 200 ಕಾಯಿಗಳನ್ನು ಪಡೆಯಬಹುದು. ಅದಲ್ಲದೇ ಮೌಲ್ಯವರ್ಧನೆ ಕಡೆ ಇನ್ನಷ್ಟು ಮುತುವರ್ಜಿವಹಿಸಿದರೆ ತೆಂಗಿನ ಮರಗಳು ಮತ್ತಷ್ಟು ವೃದ್ದಿಯಾಗಲಿವೆ ಎಂದು ಹೇಳಿದರು
ಲಕ್ಕಮ್ಮನಹಳ್ಳಿ ಗ್ರಾಪಂ ಉಪಾಧ್ಯಕ್ಷ ಹರೀಶ್, ಮಾಜಿ ಅಧ್ಯಕ್ಷೆ ರತ್ನಮ್ಮ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಸತೀಶ್, ಡಾ.ಸುಚಿತ್ರ, ಡಾ.ಸಹನಾ, ಮಾರಾಟ ಸಹಕಾರ ಸಂಘದ ನಿರ್ದೇಶಕ ಆನಂದ್ ಇದ್ದರು.