ಶಿವಮೊಗ್ಗದಲ್ಲಿ ಫೆ.8ಕ್ಕೆ 288 ಫಲಾನುಭವಿಗಳಿಗೆ ಮನೆ ಹಸ್ತಾಂತರ

4 smg 13
Published on

ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.8ರಂದು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 288 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಡಿಸಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, 3 ಸಾವಿರ ಮನೆಗಳ ಪೈಕಿ ಈಗಾಗಲೇ 288 ಮನೆಗಳು ಉದ್ಘಾಟನೆಗೆ ಸಜ್ಜಾಗಿವೆ. ಅವುಗಳನ್ನು ಫಲಾನುಭವಿಗಳಿಗೆ ನೇರವಾಗಿ ಹಸ್ತಾಂತರಿಸುವರು. ಜತೆಗೆ 700 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವರು ಎಂದರು.

ಅಂದು ಎನ್‌ಇಎಸ್ ಮೈದಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಉದ್ಘಾಟನೆಗೆ ಪೂರ್ವದಲ್ಲಿ ವಿದ್ಯುತ್, ಕುಡಿಯುವ ನೀರು ಮೊದಲಾದ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಅವರು ಸೂಚನೆ ನೀಡಿದರು.

ಡಿಸಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಸಿಎಂ ಭೇಟಿ ಸಂದರ್ಭದಲ್ಲಿ ಯಾವುದೇ ಲೋಪದೋಷಗಳಾಗದಂತೆ ಶಿಷ್ಟಾಚಾರದ ಮಾರ್ಗಸೂಚಿ ಪಾಲಿಸಬೇಕು. ಆಂಬ್ಯುಲೆನ್ಸ್, ಅಗ್ನಿಶಾಮಕ ದಳದ ವಾಹನ ಇತ್ಯಾದಿ ತುರ್ತು ಸೇವೆಗಳು ಸನ್ನದ್ಧವಾಗಿರಬೇಕು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಎಂದು ಸೂಚಿಸಿದರು. ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಎಡಿಸಿ ಎಸ್.ಎಸ್.ಬಿರಾದಾರ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net