

ಬೆಂಗಳೂರು: ದೇಶದ ಮೊದಲ ಬುಲೆಟ್ ಟ್ರೈನ್ ತಯಾರಿಕೆಯಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಲಿದ್ದು, ಮುಂಬೈ-ಅಹಮದಾಬಾದ್ ರೈಲು ಕಾರಿಡಾರ್‌ನಲ್ಲಿ 289ಕಿಮೀ ವೇಗದ ಪ್ರಥಮ ಮೇಕ್ ಇನ್ ಇಂಡಿಯಾ ಬುಲೆಟ್ ರೈಲು ಓಡಲಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಎರಡು ಹೈಸ್ಪೀಡ್ ಚೇರ್-ಕಾರ್ ರೈಲುಗಳನ್ನು ತಯಾರಿಸಲು 2024ರ ಸೆ.5 ರಂದು ಈ ಸಂಬಂಧ ಟೆಂಡರ್ ಆಹ್ವಾನಿಸಿದೆ. ಸೆ.19 ರಂದು ಬಿಡ್ ಸಲ್ಲಿಕೆ ಗಡುವು ಅಂತಿಮವಾಗಿದ್ದು, ರೈಲುಗಳ ನಿರ್ಮಾಣ ಬಿಇಎಂಎಲ್‌ನ ಬೆಂಗಳೂರು ಘಟಕದಲ್ಲಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಎಂಟು ಬೋಗಿಗಳ ಎರಡು ರೈಲುಗಳನ್ನು ನಿರ್ಮಿಸಲು ಬೆಂಗಳೂರು, ಮೈಸೂರು ಮತ್ತು ಕೆಜಿಎಫ್ನಲ್ಲಿ ಘಟಕಗಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಮಾತ್ರ ಬಿಡ್ ಸಲ್ಲಿಸಿದೆ. ಒಂದು ವಾರದೊಳಗೆ ಟೆಂಡರ್ ಅಂತಿಮಗೊಳಿಸಲಾಗುವುದು ಎಂದು ಚೆನ್ನೈನ ಐಸಿಎಫ್ ಜನರಲ್ ಮ್ಯಾನೇಜರ್ ಯು.ಸುಬ್ಬಾರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇವಲ ಎರಡು ಕೋಚ್ ನಿರ್ಮಾಣ ಗುತ್ತಿಗೆ ಇದಾಗಿರುವುದರಿಂದ ಇತರೆ ತಯಾರಕರು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಎರಡೂವರೆ ವರ್ಷದಲ್ಲಿ ರೈಲುಗಳ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ರೈಲು 3 ಮತ್ತು 2 ಆಸನ ವ್ಯವಸ್ಥೆಯೊಂದಿಗೆ ಏಳು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬೋಗಿಗಳು, 2 ಮತ್ತು 2 ಆಸನಗಳೊಂದಿಗೆ ಒಂದು ಕಾರ್ಯನಿರ್ವಾಹಕ ಬೋಗಿಯನ್ನು ಒಳಗೊಂಡಿರುತ್ತದೆ. ಒಟ್ಟು 174 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಭವಿಷ್ಯದ ಬೇಡಿಕೆಯನ್ನು ಆಧರಿಸಿ, 12 ಅಥವಾ 16 ಹೆಚ್ಚುವರಿ ಬೋಗಿಗಳನ್ನು ಇದಕ್ಕೆ ಸೇರಿಸಬಹುದು ಎಂದು ರಾವ್ ವಿವರಿಸಿದರು.
ಇನ್ನು ಈ ರೈಲುಗಳನ್ನು ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ಗಳಿಗಾಗಿ ನಿರ್ಮಿಸಲಾಗುತ್ತದೆ. ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆ ಸಂಭಾವ್ಯ ರಫ್ತಿನ ಮೇಲೆ ಗಮನ ಕೇಂದ್ರೀಕರಿಸಿ ಗುಣಮಟ್ಟದ ರೈಲುಗಳನ್ನು ನಿರ್ಮಿಸಲಾಗುವುದು. ಪ್ರತಿ ರೈಲಿಗೆ ಅಂದಾಜು 200ರಿಂದ 250 ಕೋಟಿ ರೂ. ವೆಚ್ಚವಾಗಬಹುದು. ಮೊದಲ ರೈಲು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ (ಎಂಎಎಚ್ಎಸ್ಆರ್) ಕಾರಿಡಾರ್‌ನಲ್ಲಿ ಚಲಿಸಲಿದ್ದು, ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಸ್ಎಚ್ಆರ್ಸಿಎಲ್) ಅಭಿವೃದ್ಧಿಪಡಿಸುತ್ತಿದೆ ಎಂದು ರಾವ್ ಹೇಳಿದರು.
ಬಿಇಎಂಎಲ್ ಬೆಂಗಳೂರು ಘಟಕ ಅಂತಿಮ ಜೋಡಣೆ ಮತ್ತು ರೋಲ್‌ಔಟ್ ಅನ್ನು ನಿರ್ವಹಿಸುತ್ತದೆ. ಯಶಸ್ವಿ ಪ್ರಯೋಗಗಳ ನಂತರ, ದೆಹಲಿ-ವಾರಣಾಸಿ, ಮುಂಬೈ-ಹೈದರಾಬಾದ್, ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಹೈಸ್ಪೀಡ್(ಬುಲೆಟ್)ರೈಲುಗಳ ನಿರ್ಮಾಣಕ್ಕೆ ಬಿಇಎಂಎಲ್ ಬೆಂಗಳೂರು ಘಟಕಕ್ಕೆ ಅವಕಾಶ ಒಲಿದು ಬರುವ ನಿರೀಕ್ಷೆ ಹೆಚ್ಚಿದೆ. ಈ ರೈಲುಗಳು ಗಂಟೆಗೆ 280ಕಿಮೀ ವೇಗ ಹೊಂದಿರಲಿವೆ. ಮೊದಲ ರೈಲನ್ನು ಡಿಸೆಂಬರ್ 2026 ರ ವೇಳೆಗೆ ಪರಿಚಯಿಸಲು ಯೋಜಿಸಲಾಗಿದೆ. ಸೂರತ್-ಬಿಲಿಮೊರಾ ವಿಭಾಗದಲ್ಲಿ ಇದರ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.