ಬಿಇಎಂಎಲ್ ಗ್ರೂಪಿ -ಸಿ ಹುದ್ದೆ ನೇಮಕಾತಿ ತಡೆ : ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

highcourt
Published on

ಬೆಂಗಳೂರು : ಭಾರತ್ ಅರ್ಥ್ ಮೂವರ್ಸ್ ಮಿಲಿಟೆಡ್ (ಬಿಇಎಂಎಲ್) ಗ್ರೂಪಿ -ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತ್ತಿನಲ್ಲಿ ಇರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ತಡೆ ನೀಡಿದಂತಾಗಿದೆ.

ಈ ವಿಚಾರವಾಗಿ ಬಿಇಎಂಎಲ್ ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಹಾಗೂ ತಮ್ಮ ಸೇವೆಯನ್ನೇ ಕಾಯಂಗೊಳಿಸಲು ಆದೇಶಿಸುವಂತೆ ಮನವಿ ಮಾಡಿ ಗುತ್ತಿಗೆ ಕಾರ್ಮಿಕರ ಸಂಘ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್ ಹೇಮಲೇಖಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಾದ- ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಇಂದಿನಿಂದ ಒಂದು ತಿಂಗಳ ಕಾಲ ಬಿಇಎಂಎಲ್ 2023 ರ ಸೆ. 27 ರಂದು ಹೊರಡಿಸಿದ ಅಧಿಸೂಚನೆಯನ್ನು ಅಮಾನತ್ತಿನಲ್ಲಿ ಇರಿಸುವುದಾಗಿ ಆದೇಶಿಸಿದೆ.

ಅಲ್ಲದೆ, ಅಧಿಸೂಚನೆ ಅಡಿಯಲ್ಲಿ ಉದ್ಯೋಗ ಅವಕಾಶ ಒದಗಿಸುವಂತೆ ಗುತ್ತಿಗೆ ನೌಕರರ ಮನವಿ ಪರಿಗಣಿಸುವಂತೆ ಬಿಇಎಂಎಲ್ ಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಅಷ್ಟೇ ಅಲ್ಲದೆ, ಗುತ್ತಿಗೆ ನೌಕರರು ಅರ್ಹತೆ ಹೊಂದಿದ್ದು ಮತ್ತು ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡದಿರುವಲ್ಲಿ ನ್ಯಾಯಯುತ ಕಾರಣವಿದ್ದಿರಬಹುದು. ನಿರ್ದಿಷ್ಟ ಕೌಶಲ ಅಥವಾ ಇತರ ಮಾನ್ಯ ಕಾರಣಗಳಿಂದ ಗ್ರೂಪಿ -ಸಿ ಹುದ್ದೆಗಳಿಗೆ ಗುತ್ತಿಗೆ ನೌಕರರ ಹೊರತಾಗಿ ಬೇರೆ ನೌಕರರನ್ನು ಆಹ್ವಾನಿಸುವುದು ಕಾನೂನಾತ್ಮಕವಾಗಿ ಸಮರ್ಥನೀಯ ಎನ್ನಬಹುದು ಮತ್ತು ಆಗ ಮಾತ್ರ ಕಾಯಂಗೊಳಿಸುವ ಅರ್ಹತೆ ಹೊಂದಿರುವ ಗುತ್ತಿಗೆ ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷಿಸಬಹುದು ಎಂದು ಪೀಠ ಹೇಳಿದೆ.

ಮಾತ್ರವಲ್ಲದೆ, ಉದ್ಯೋಗದಾತರು ಗುತ್ತಿಗೆ ಕಾರ್ಮಿಕರ ಸ್ಥಿತಿ-ಗತಿಯನ್ನು ಪರಿಶೀಲಿಸಿ ನಿಯಮಗಳಿಗೆ ಅನುಸಾರ ಅವರ ಅರ್ಹತೆಯನ್ನು ನಿರ್ಣಯಿಸುವುದು ಮತ್ತು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ನ್ಯಾಯೋಚಿತ ಮತ್ತು ಪಾರದರ್ಶಕವಾಗಿ ನಡೆಸುವುದು ಮುಖ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಜತೆಗೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆ ಅಥವಾ ಬೇಡವೇ ಎಂಬುದು ಸೂಕ್ತ ಸರ್ಕಾರದ ನಿರ್ಣಯಕ್ಕೆ ಮಾತ್ರ ಒಳಪಟ್ಟಿರುತ್ತದೆ ಎಂಬ ಸರ್ಕಾರದ ಮನವಿಯನ್ನು ಪೀಠ ಅಲ್ಲಗಳೆದಿದೆ.

ಅಲ್ಲದೆ ಅರ್ಜಿದಾರರ ಮನವಿ ಪರಿಗಣಿಸಿದ ನ್ಯಾಯಪೀಠ, ಕಾನೂನು ಅಡಿಯಲ್ಲಿ ಕಾರ್ಮಿಕರು ತಮ್ಮದೇ ಆದ ಕಾನೂನು ಬದ್ಧ ಹಕ್ಕುಗಳನ್ನು ಹೊಂದಿರಬಹುದು. ಈ ಬಗ್ಗೆ ಕೈಗಾರಿಕಾ ನ್ಯಾಯಮಂಡಳಿಯನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಿದ್ದು. ಈ ವಿಚಾರವಾಗಿ ಭಾರತ್ ಅರ್ಥ್ ಮೂವರ್ಸ್ ಮಿಲಿಟೆಡ್ (ಬಿಇಎಂಎಲ್) ಗ್ರೂಪಿ -ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹೊರಡಿಸಿದ್ದ ಅಧಿಸೂಚನೆ ಅನ್ನು ಒಂದು ತಿಂಗಳಕಾಲ ಅಮಾನತ್ತಿನಲ್ಲಿ ಇರಿಸುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net